ಕೈತಪ್ಪಿದ ಟಿಕೆಟ್:ಸಂಸದ ಸಂಗಣ್ಣ ಹೇಳಿಕೆ. ಗುರುವಾರ ಬೆಂಬಲಿಗರ ಸಭೆಯಲ್ಲಿ ನಿರ್ಧಾರ
ಕೊಪ್ಪಳ.
ಲೋಕಸಭೆ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸಂಸದ ಸಂಗಣ್ಣ ಕರಡಿ ಗುರುವಾರ ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ತಮ್ಮ ನಡೆಯನ್ನು ಗುರುವಾರದವರೆಗೆ ನಿಗೂಢವಾಗಿರುವುದಾಗಿ ತಿಳಿಸಿದರು. ನಾನು ಕಳೆದ ಹತ್ತು ವರ್ಷಗಳಿಂದ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈ ಭಾರಿಯೂ ನನಗೆ ಟಿಕೆಟ್ ದೊರೆಯುವ ವಿಶ್ವಾಸ ಇತ್ತು. ಆದರೆ ಹೈಕಮಾಂಡ್ ದಿಡೀರ್ ಡಾ|| ಬಸವರಾಜ ಕ್ಯಾವಟರ್‌ಗೆ ನೀಡಿದೆ. ಈ ಸಂದರ್ಭದಲ್ಲಿ ಟಿಕೆಟ್ ಪಡೆದುಕೊಂಡಿರುವ ಯುವ ನಾಯಕ ಡಾ|| ಬಸವರಾಜ ಅವರನ್ನು ನಾನು ಅಭಿನಂದಿಸುತ್ತೇನೆ. ಆದರೆ ನನಗೆ ಟಿಕೆಟ್ ತಪ್ಪಿಸಿರುವುದಕ್ಕೆ ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಅಸಮಾಧಾನವಿದೆ. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಥವಾ ಪಕ್ಷದ ಹಿರಿಯ ನಾಯಕರು ನನ್ನೊಂದಿಗೆ ಈ ಕುರಿತು ಚರ್ಚಿಸದೇ ಈ ನಿರ್ಧಾರ ಕೈಗೊಂಡಿರುವುದು ನನಗೆ ಬೇಸರ ಮೂಡಿಸಿದೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಅವರನ್ನು ಮೊದಲು ನಾನು ಅಭಿನಂದಿಸಿದ್ದೆ. ಯಡಿಯೂರಪ್ಪ ಅವರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಆದರೆ ಅವರು ಸೌಜನ್ಯಕ್ಕಾದರೂ ನನ್ನೊಂದಿಗೆ ಮಾತನಾಡಿ ಟಿಕೆಟ್ ಬದಲಾವಣೆ ಕುರಿತು ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನನಗೆ ಶಾಕ್ ಆಗಿತ್ತು. ಆದರೆ ಸಿಂಧನೂರು ರೈಲ್ವೆ ಸಂಚಾರ ಪ್ರಾರಂಭ ಮತ್ತು ಕೆಲವು ಸರಕಾರಿ ಕಾರ್ಯಕ್ರಮದ ಕಾರ್ಯದಲ್ಲಿ ಇದ್ದೆ. ಹೀಗಾಗಿ ನನಗೆ ಮಾಧ್ಯಮಗಳೊಂದಿಗೆ ಕುಳಿತು ಮಾತನಾಡಲು ಆಗಿದ್ದಿಲ್ಲ. ನನಗೆ ಟಿಕೆಟ್ ಕೈತಪ್ಪಿರುವುದರಿಂದ ಕ್ಷೇತ್ರದ ನನ್ನ ಬೆಂಬಲಿಗರು, ಕಾರ್ಯಕರ್ತರು ಮತ್ತು ಹಲವು ಮುಖಂಡರಿಗೆ ನೋವ್ವಾಗಿದೆ. ಆದರೆ ಭಾರತೀಯ ಜನತಾ ಪಕ್ಷದಿಂದ ನನಗೆ ಸಾಕಷ್ಟು ಸಹಕಾರ ಸಿಕ್ಕಿದೆ. ಏಕಾ ಏಕಿ ಟಿಕೆಟ್ ತಪ್ಪಿಸುವ ಔದಾರ್ಯ ಎನಿತ್ತು. ಈ ಕುರಿತು ಹೈಕಮಾಂಡ್ ನಾಯಕರಿಗೆ ಮೂರು ಪ್ರಶ್ನೇಗಳನ್ನು ಮುಂದಿಟ್ಟಿದ್ದೇನೆ. ಇದಕ್ಕೆ ಅವರು ಇದುವರೆಗೂ ಉತ್ತರಿಸಿಲ್ಲ. ನನಗೆ ಅಸಮಾಧಾನವಾಗಿರುವುದು ಸಹಜ. ರಾಜಕೀಯ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ ನನಗೆ ಕಾರ್ಯಕರ್ತರು, ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಗುರುವಾರ ನಗರದ ಶಾಂತವೀರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸುತ್ತಿದ್ದೇನೆ. ಅಲ್ಲಿ ಎಲ್ಲರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ನನಗೆ ಈಗಾಗಲೇ ಮಾತನಾಡುತ್ತಿದ್ದಾರೆ. ಅವರಿಗೆ ನಾನು ಯಾವುದೇ ಭರವಸೆ ನೀಡಿಲ್ಲ. ಜಿಲ್ಲೆಯ ಕೆಲವು ನಾಯಕರು ನನಗೆ ಟಿಕೆಟ್ ತಪ್ಪುವಲ್ಲಿ ಪ್ರಮುಖ ಪಾತ್ರವಹಿಸಿರುವುದು ನನಗೆ ಬೇಸರವಿದೆ. ಯಾರು ಟಿಕೆಟ್ ತಪ್ಪಿಸಿದ್ದಾರೋ ಅವರು ಚುನಾವಣೆ ನೇತೃತ್ವವಹಿಸಲಿ. ನಾನು ಈ ಚುನಾವಣೆಯಲ್ಲಿ ಲಿಡರ್‌ಶಿಪ್ ತೆಗೆದುಕೊಳ್ಳುವುದಿಲ್ಲ. ಎಲ್ಲವು ಗುರುವಾರದ ಸಭೆಯಲ್ಲಿ ನಿರ್ಣಯವಾಗಲಿವೆ ಎಂದು ಮುಂದಿನ ತಮ್ಮ ರಾಜಕೀಯ ನಡೆಯ ಗುಟ್ಟನ್ನು ಬಿಟ್ಟುಕೊಡಲಿಲ್ಲ.
ಗೋಷ್ಟಿಯಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮತ್ತಿತರು ಇದ್ದರು.