ಐದು ಕ್ಷೇತ್ರದಲ್ಲಿ ಕೆಆರ್‌ಪಿಪಿಯಿಂದ ಸ್ಪರ್ಧೆ. ಶಾಸಕ ಗಾಲಿ ಜನಾರ್ಧನರೆಡ್ಡಿ ಸ್ಪಷ್ಟನೆ
ಗಂಗಾವತಿ.
ಮುಂಬುರವ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರ ಸೇರಿ ರಾಜ್ಯದ ಐದು ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಗುರುವಾರ ಅವರು ನಗರದಲ್ಲಿ ತಮ್ಮ ಅಭಿಮಾನಿಗಳು ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಭ್ಯರ್ಥಿಗಳ ಸ್ಪರ್ಧೆ ಕುರಿತು ಸ್ಪಷ್ಟನೆ ನೀಡಿದರು. ಕಳೆದ ವರ್ಷ ನನ್ನ ಹುಟ್ಟುಹಬ್ಬ ಆಚರಣೆಯೊಂದಿಗೆ ಕೆಆರ್‌ಪಿಪಿ ಪಕ್ಷ ಪ್ರಾರಂಭಿಸಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲಾಗಿತ್ತು. ಮತ್ತು ನಾನು ಗಂಗಾವತಿ ಕ್ಷೇತ್ರದಿಂದ ಆಯ್ಕೆಯಾಗಿ ಈಗ ವಿಧಾನಸಭೆಯಲ್ಲಿ ಕೆಆರ್‌ಪಿಪಿಯಿಂದ ಪ್ರವೇಶ ಮಾಡಿದ್ದೇನೆ. ಲೋಕಸಭೆಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಲೋಕಸಭೆಗೆ ನಮ್ಮ ಪಕ್ಷದಿಂದ ಪ್ರತಿನಿಧಿತ್ವ ಇರಲಿದೆ ಎಂದ ಅವರು ಜ.೨೨ ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಪಕ್ಷದಿಂದ ನಿರಾಕರಿಸಲಾಗಿದೆ ಎಂಬ ವಿಷಯಕ್ಕೆ ನಾನು ಯಾವುದೇ ಪ್ರತಿಕ್ರೀಯೆ ನೀಡುವುದಿಲ್ಲ. ರಾಮಮಂದಿರ ಶ್ರದ್ಧೆಯ ವಿಷಯವಾಗಿದೆ. ಇದರಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಶ್ರದ್ಧೆ, ಭಕ್ತಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.