Blog

ಹಿಜಾಬ್ ವಿಷಯ: ಬಿಜೆಪಿ ಚುನಾವಣಾ ಗಿಮಿಕ್- ಊಟ, ಬಟ್ಟೆ ಅವರಿಷ್ಟ: ಸಚಿವ ಶಿವರಾಜ ತಂಗಡಗಿ- ಜಾತ್ಯಾತೀತ ದೇಶದಲ್ಲಿ ಬಿಜೆಪಿಯಿಂದ ಜಾತಿ ಜಗಳ

ಕಾರಟಗಿ.
ಈ ಹಿಂದೆ ಒಂದು ಧರ್ಮದ ವಿದ್ಯಾರ್ಥಿನಿಯರು ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡು ಹೋಗುವುದನ್ನೆ ದೊಡ್ಡದಾಗಿ ಬಿಂಬಿಸಿದ ಭಾರತೀಯ ಜನತಾ ಪಕ್ಷದ ನಾಯಕರಿಗೆ ಚುನಾವಣೆಯಲ್ಲಿ ಜನತೇ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಹಿಜಾಬ್ ವಿಷಯವನ್ನು ಬಿಜೆಪಿಗರು ಚುನಾವಣಾ ಗಿಮಿಕ್ ಮಾಡಿಕೊಳ್ಳುತ್ತಾರೆ. ಊಟ ಮಾಡುವುದು ಮತ್ತು ಬಟ್ಟೆ ಧರಿಸುವ ವಿಷಯದಲ್ಲಿ ಎಲ್ಲರಿಗೂ ಸ್ವತಂತ್ರ ಇರಬೇಕು. ಮತ್ತು ಇದೆ ಕೂಡಾ. ಭಾರತ ಜಾತ್ಯಾತೀತ ದೇಶವಾಗಿದ್ದು, ಎಲ್ಲಿರಿಗೂ ಅವರದೇ ಆದ ಆಚಾರ, ವಿಚಾರ, ಸಂಪ್ರದಾಯಗಳನ್ನು ಅನುಸರಿಸಲು ಅವಕಾಶವಿದೆ. ಜಾತ್ಯಾತೀತ ದೇಶದಲ್ಲಿ ಬಿಜೆಪಿಗರು ಜಾತಿ ಜಗಳ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಹಿಂದುಳಿದ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಜಾಬ್ ಕುರಿತು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡು ಶನಿವಾರ ಪಟ್ಟಣದ ತಮ್ಮ ನಿವಾಸದಲ್ಲಿ ಅವರು ಮಾತನಾಡಿದರು. ಶಾಲಾ, ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ಅವರ ಧಾರ್ಮಿಕ ಸಂಪ್ರದಾಯದಂತೆ ಮುಖ ಮುಚ್ಚಿಕೊಳ್ಳುವ ಹಿಜಾಬ್‌ನ್ನು ಹಾಕಿಕೊಂಡು ಹೋಗುವುದು ರೂಢಿ. ಆದರೆ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಹಿಜಾಬ್ ವಿಷಯವನ್ನು ದೊಡ್ಡ ರಾದ್ಧಾಂತವನ್ನಾಗಿ ಬಿಂಬಿಸಿತು. ಮತ್ತು ಹಿಜಾಬ್ ನಿಷೇಧಿಸಿ ಸರಕಾರ ಆದೇಶ ಮಾಡಿತು. ಇದರ ವಿರುದ್ಧ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಹೈಕೋರ್ಟ್‌ಗೆ ಹೋದರು. ನಂತರ ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಹಕ್ಕಿಗಾಗಿ ಕೆಸ್ ದಾಖಲಿಸಿದ್ದಾರೆ. ಕೋರ್ಟ್‌ನಲ್ಲಿ ಈ ವಿಷಯ ಕುರಿತು ವಿಚಾರಣ ನಡೆಯುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾತ್ಯಾತೀತವಾಗಿ ಯೋಚನೆ ಮಾಡುವ ನಾಯಕರಾಗಿದ್ದಾರೆ. ಯಾರಿಗೂ ಅನ್ಯಾಯವಾಗದಂತೆ ಸರಕಾರ ನಡೆದುಕೊಳ್ಳಬೇಕೆಂಬ ಉದ್ದೇಶದಿಂದ ಹಿಂದಿನ ಸರಕಾರ ಜಾರಿ ಮಾಡಿದ್ದ ಹಿಜಾಬ್ ನಿಷೇಧವನ್ನು ಮರು ಪರಿಶೀಲಿಸಿ ಸಾಧ್ಯವಾದರೆ ಆದೇಶ ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ಈ ಕುರಿತು ಚರ್ಚೆ ನಡೆಯುತ್ತಿದೆ. ಸಮವಸ್ತ್ರದ ಮೇಲೆ ಹಿಜಾಬ್ ಧರಿಸಿಕೊಂಡು ಕೆಲವು ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ಹೋದರೆ ತಪ್ಪೇನಿದೆ. ಬಿಜೆಪಿ ಮುಖಂಡರು ಈ ದೇಶದ ಪಾರ್ಲಿಮೆಂಟಿನ ಮೇಲೆ ನಡೆಯುವ ದಾಳಿಯನ್ನು ತಡೆಯುವ ತಾಕತ್ತು ಇಲ್ಲ. ದೇಶಕ್ಕೆ ಭದ್ರತೆ ನೀಡುವ ವಿಷಯದಲ್ಲಿ ಅವರು ಕಿಂಚಿತ್ ಕಾಳಜಿವಹಿಸುತ್ತಿಲ್ಲ. ಲೋಕಸಭೆ ಅಧಿವೇಶನ ನಡೆಯುತ್ತಿರುವಾಗ ನೇರವಾಗಿ ದಾಳಿ ನಡೆದಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಮತ್ತು ಅದರ ಬಗ್ಗೆ ಕಿಂಚಿತ್ ಮಾತನಾಡುವುದಿಲ್ಲ. ಆದರೆ ಹಿಜಾಬ್, ಹಲಾಲ್‌ನಂತ ವಿಷಯವನ್ನು ಕೆಬಕಿ ರಾಜಕೀಯ ಮಾಡುತ್ತಾರೆ. ಅವರಿಗೆ ಚುನಾವಣೆಯಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಹಚ್ಚಲು ವಿಷಯ ಬೇಕಷ್ಟೆ ಎಂದು ತಂಗಡಗಿ ಬಿಜೆಪಿಗರ ವಿರುದ್ಧ ಕಿಡಿ ಕಾರಿದರು.
ಮುಂದುವರೆದು ಮಾತನಾಡಿದ ಅವರು ಊಟ ಮಾಡುವುದು ಮತ್ತು ಬಟ್ಟೆ ಧರಿಸುವ ವಿಷಯದಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರವಿದೆ. ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ ನಾವು ಯಾರಿಗೂ ಯಾವ ವಿಷಯದ ಬಗ್ಗೆ ಷರತ್ತು ಹಾಕಲು ಬರುವುದಿಲ್ಲ. ಮತ್ತು ಅವರ ಅವರ ಸಂಪ್ರಧಾಯವನ್ನು ಪಾಲಿಸುತ್ತಾರೆ. ಇದಕ್ಕೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಪ್ರತಿಯೊಬ್ಬರು ಇಂತದೇ ಊಟ ಮಾಡಬೇಕು ಎಂದು ಬಿಜೆಪಿಗರು ಊಟದ ಮೇನು ಕಳಿಸಿಕೊಡುವ ಯೋಚನೆ ಮಾಡುತ್ತಿದ್ದಾರೆ. ಬಿಜೆಪಿಗರ ಇಂತಹ ಚುನಾವಣಾ ಗಿಮಿಕ್‌ಗೆ ಜನ ಈಗಾಗಲೇ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ರಾಜ್ಯದ ಜನ ಬಿಜೆಪಿಗರಿಗೆ ಯಾವ ರೀತಿ ಬುದ್ಧಿ ಕಲಿಸುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಕಿಡಿ ಕಾರಿದರು.
ಬಾಕ್ಸ್:
ಬಿಜೆಪಿಗರನ್ನು ಕೇಳಿ ಊಟ, ಬಟ್ಟೆ ಧರಿಸಬೇಕಾ..?
ಭಾರತ ಜಾತ್ಯಾತೀತ ದೇಶವಾಗಿದೆ. ಇಲ್ಲಿ ಎಲ್ಲರಿಗೂ ಅವರದೇ ಆದ ರೀತಿಯಲ್ಲಿ ಬದುಕುವ ಹಕ್ಕಿದೆ. ಸಮವಸ್ತ್ರದ ಮೇಲೆ ಕೆಲವು ಧರ್ಮದ ವಿದ್ಯಾರ್ಥಿನಿಯರು ಹೀಜಾಬ್ ಧರಿಸಿಕೊಂಡು ಶಾಲೆ, ಕಾಲೇಜಿಗೆ ಹೋಗುತ್ತಾರೆ. ಇದಕ್ಕೆ ಬಿಜೆಪಿಗರು ಯಾಕೆ ತಗಾದೆ ತೆಗೆಯಬೇಕು. ಚುನಾವಣೆಗಾಗಿ ಬಿಜೆಪಿಗರು ಹಿಜಾಬ್‌ನಂತಹ ವಿಷಯ ತರುತ್ತಾರೆ. ಊಟ ಮಾಡುವ ಮತ್ತು ಬಟ್ಟೆ ಧರಿಸುವ ವಿಷಯದಲ್ಲಿ ಯಾರು ಪ್ರಶ್ನಿಸಬಾರದು. ಬಿಜೆಪಿಗರನ್ನು ಕೇಳಿ ಊಟ ಮಾಡಬೇಕಾ ಎಂದು ಎಂದು ಮಾಧ್ಯಮದ ಮೂಲಕ ಬಿಜೆಪಿಗರನ್ನು ಪ್ರಶ್ನಿಸಿದ ಸಚಿವ ಶಿವರಾಜ ತಂಗಡಗಿ ಬಿಜೆಪಿಗರು ಎಲ್ಲಾ ಜನರಿಗೆ ಊಟದ ಮೇನು ಕಳಿಸಲು ಮುಂದಾಗಿರಬೇಕು ಎಂದು ವ್ಯಂಗ್ಯ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button