ಖರ್ಗೆ ಆಪ್ತ ಭವಾನಿಮಠ ಬಿಜೆಪಿಕಡೆ ಮುಖ
ಗಂಗಾವತಿ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ, ಕೆಪಿಸಿಸಿ ಸದಸ್ಯ ಹಾಗೂ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಮುಖಂಡ, ಮಾಜಿ ಜಿಪಂ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಲೋಕಸಭೆ ಚುನಾವಣೆ ನಿಮಿತ್ಯ ಕೊಪ್ಪಳ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ದೃವೀಕರಣ ಕುರಿತು ಸಮರ್ಥವಾಣಿಯೊಂದಿಗೆ ಮಾತನಾಡಿ ಶೀಘ್ರ ಬಿಜೆಪಿ ಸೇರ್ಪಡೆಯಾಗುವ ನಿರ್ಣಯ ಮಾಡಿರುವುದಾಗಿ ಸ್ಪಷ್ಟಪಡಿಸಿದರು. ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದೇನೆ. ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟ್ಟಾ ಬೆಂಬಲಿಗ ಕೂಡಾ. ಆದರೆ ಕನಕಗಿರಿ ಕ್ಷೇತ್ರ ಸೇರಿದಂತೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಸರಕಾರದ ಅನುದಾನದ ಗಂಟು ಕಳ್ಳತನ ಮಾಡುವ ನಾಯಕರು ಹೆಚ್ಚುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಪಡೆದವರು ಸರಕಾರದ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ. ತಮ್ಮಿಂದಲೇ ಕಾಂಗ್ರೆಸ್ ಎಂಬಂತೆ ವರ್ತಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ನಾನು ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ. ಈ ಕುರಿತು ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಹಲವು ಬಿಜೆಪಿ ನಾಯಕರು ನನ್ನೊಂದಿಗೆ ಚರ್ಚಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಪಕ್ಷದ ರಾಜ್ಯ ಉಸ್ತುವಾರಿಯಾಗಿರುವ ರಾಧಾ ಮೋಹನ್ ಅವರು ಇನ್ನೆರಡು ದಿನದಲ್ಲಿ ಕೊಪ್ಪಳಕ್ಕೆ ಬರುವ ನಿರೀಕ್ಷೆ ಇದೆ. ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ ಎಂದರು.