ಜಿಲ್ಲಾ ಸುದ್ದಿ
ಪಂಪಾಸರೋವರದ ಅತಿಥಿ ಗೃಹಕ್ಕೆ ಬೆಂಕಿ. ಕಿಡಿಗೇಡಿಗಳ ದುಷ್ಕೃತ್ಯ:ಕೆಆರ್‌ಪಿಪಿ ಆರೋಪ
- ಗಂಗಾವತಿ.
ತಾಲೂಕಿನ ಐತಿಹಾಸಿಕ ಮತ್ತು ಪುರಾತತ್ವ ಇಲಾಖೆಯ ಮತ್ತು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಪಂಪಾಸರೋವರದ ಆವರಣದಲ್ಲಿ ನಿರ್ಮಿಸಿದ್ದ ಕುಟೀರ ಮಾದರಿಯ ಅತಿಥಿ ಗೃಹಕ್ಕೆ ಬೆಂಕಿ ಹತ್ತಿ ಸಂಪೂರ್ಣ ಭಸ್ಮವಾಗಿದೆ. ಗೃಹದ ಒಳಗಡೆ ಇದ್ದ ಎಲ್ಲಾ ಪಿಠೋಪಕರಗಳು ಮತ್ತು ಮೇಲ್ಚಾವಣಿ ಸುಟ್ಟು ಕರಕಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ವಿಷಯ ತಿಳಿದು ಆಗಮಿಸಿದ ಕೆಆರ್‌ಪಿಪಿ ಯುವ ಮುಖಂಡರು ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದ್ದು, ಇದು ಕೆಲವು ಕಿಡಿಗೇಡಿಗಳು ನಡೆಸಿರುವ ದುಷ್ಕೃತ್ಯವಾಗಿದೆ ಎಂದು ಆರೋಪಿಸಿದರು.
ಬುಧವಾರ ಮದ್ಯಾಹ್ನ ೧೨ ಗಂಟೆ ಸಮಯದಲ್ಲಿ ಅತಿಥಿ ಗೃಹಕ್ಕೆ ಬೆಂಕಿ ಹತ್ತಿರುವುದು ಕಂಡು ಬಂದಿದೆ. ದೇವಸ್ಥಾನಕ್ಕೆ ಬಂದ ಭಕ್ತರು ಇದನ್ನು ಗಮನಿಸಿ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಮೇಲ್ಚಾವಣಿ ಮತ್ತು ಅತಿಥಿ ಗೃಹ ನಿರ್ಮಾಣಕ್ಕೆ ಕಟ್ಟಿಗೆ ಮತ್ತು ಹುಲ್ಲಿನಿಂದ ಬಳಸಿದ್ದರಿಂದ ಅಗ್ನಿ ಶಾಮಕ ವಾಹನ ಬರುವಷ್ಟರಲ್ಲಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮೀ ಮತ್ತು ಪೊಲೀಸರು ಆಗಮಿಸಿ ಘಟನೆಯನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಈ ಕುರಿತು ಕಂದಾಯ ನಿರೀಕ್ಷಕ ಮಂಜುನಾಥ ಮಾತನಾಡಿ, ಪಂಪಾಸರೋವರದಲ್ಲಿ ಬೆಂಕಿಗೆ ಆಹುತಿಯಾಗಿರುವ ಅತಿಥಿ ಗೃಹವನ್ನು ಕಳೆದ ಎರಡು ವರ್ಷಗಳ ಹಿಂದೆ ದೇವಸ್ಥಾನ ಪುನರ್ ನಿರ್ಮಾಣದ ಸಂದರ್ಭದಲ್ಲಿ ಶ್ರೀರಾಮುಲು ಅವರು ತಾತ್ಕಾಲಿಕ ವಾಸ್ತವ್ಯಕ್ಕಾಗಿ ನಿರ್ಮಾಣ ಮಾಡಿದ್ದರು. ಇನ್ನು ದೇವಸ್ಥಾನದ ಕಾಮಗಾರಿ ನಡೆಯುತ್ತಿರುವುದರಿಂದ ಇದನ್ನು ನಮ್ಮ ಸುಪರ್ದಿಗೆ ಪಡೆದುಕೊಂಡಿದ್ದಿಲ್ಲ. ಕಳೆದ ಒಂದು ವರ್ಷದಿಂದ ಗಂಗಾವತಿ ಶಾಸಕರು ಮತ್ತು ಕೆಲವು ವಿಐಪಿ ವ್ಯಕ್ತಿಗಳು ಕೂಡಾ ಇಲ್ಲಿಗೆ ಬಂದಾಗ ಈ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬೆಂಕಿ ಹತ್ತಿರುವ ಮಾಹಿತಿ ತಿಳಿದು ಆಗಮಿಸಿದ್ದು, ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮೊತ್ತದ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಕಿ ಹತ್ತಿರುವ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೇಲಾಧಾರಿಗಳ ನಿರ್ದೇಶನದಂತೆ ಪ್ರಕರಣ ದಾಖಲಿಸಲಾಗುವುದು ಎಂದರು.
ಸ್ಥಳದಲ್ಲಿದ್ದ ಕೆಆರ್‌ಪಿಪಿ ಯುವ ಮುಖಂಡರಾದ ಯಮನೂರ ಚೌಡ್ಕಿ, ನಾಗರಾಜ ಚಳಗೇರಿ, ಚಂದ್ರಶೇಖರ ಹಿರೂರು, ಪಂಪಣ್ಣ ನಾಯಕ, ವಿರುಪಾಕ್ಷಗೌಡ ಹೆರೂರು, ಶಿವಕುಮಾರ ಆದೋನಿ ಮತ್ತಿತರು ಮಾತನಾಡಿ, ದೇವಸ್ಥಾನದ ಕಾಮಗಾರಿ ಸಂದರ್ಭದಲ್ಲಿ ಇದನ್ನು ನಿರ್ಮಿಸಲಾಗಿದೆ. ನಮ್ಮ ಶಾಸಕರು ಈ ಭಾಗಕ್ಕೆ ಬಂದಾಗ ಮತ್ತು ಹನುಮಮಾಲೆ ಕಾರ್ಯಕ್ರಮ ಸಂದರ್ಭದಲ್ಲಿ ಈ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಹನುಮಮಾಲೆ ಯಶಸ್ವಿಯನ್ನು ಸಹಿಸದ ಮತ್ತು ಶಾಸಕರಿಗೆ ತೊಂದರೆ ಕೊಡುವ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಇದಕ್ಕೆ ಬೆಂಕಿ ಹಚ್ಚಿರಬಹುದು ಎಂಬ ಅನುಮಾನ ಇದೆ ಎಂದು ಆರೋಪಿಸಿದ್ದು ತಕ್ಷಣ ಪರಿಶೀಲಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಅಗ್ರಹಿಸಿದರು.