Blog

ಆನ್‌ಲೈನ್ ವ್ಯವಹರಿಸುವಾಗ ಎಚ್ಚರಿಕೆ ಇರಲಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ಕಿವಿಮಾತು

ಆನ್‌ಲೈನ್ ವ್ಯವಹರಿಸುವಾಗ ಎಚ್ಚರಿಕೆ ಇರಲಿ
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ಕಿವಿಮಾತು

ಸಮರ್ಥವಾಣಿ ವಾರ್ತೆ
ಬಳ್ಳಾರಿ,ಡಿ.27: ಸಾರ್ವಜನಿಕರು ಇಂದಿನ ಡಿಜಿಟಲ್ ಯುಗದಲ್ಲಿ ವ್ಯವಹರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಕಿವಿಮಾತು ಹೇಳಿದರು.
ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಮುಖ್ಯ ರಸ್ತೆಯ ಶ್ರೀಮೇದಾ ಪದವಿಪೂರ್ವ ವಿದ್ಯಾಲಯದ ಆಡಿಟೋರಿಯಮ್ ಸಭಾಂಗಣದಲ್ಲಿ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರ ಯುಗದಲ್ಲಿ ಗ್ರಾಹಕರ ರಕ್ಷಣೆ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಔದ್ಯೋಗಿಕರಣದ ನಂತರ ಬಂದಿರುವ ಪ್ರಸ್ತುತ ಡಿಜಿಟಲ್ ಯುಗದಲ್ಲಿ ಜನರು ಬಹುತೇಕ ಆನ್‌ಲೈನ್‌ನಲ್ಲಿಯೇ ವ್ಯವಹರಿಸು ವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಮೋಸ ಕೂಡ ಹೋಗುತ್ತಿದ್ದಾರೆ. ಆದ್ದರಿಂದ ಗ್ರಾಹಕರು ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಬಹಳ ಎಚ್ಚರಿಕೆ ವಹಿಸ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ ೧೯೩೨ರಲ್ಲಿ ಗ್ರಾಹಕರ ವ್ಯಾಜ್ಯದಲ್ಲಿ ನಡೆದ ಡೊನೊಗ್ಯು ವಿ ಸ್ಟೀವನ್ಸ್‌ನ ಪ್ರಕರಣದ ಸಾರಾಂಶ ವಿವರಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ.ಎನ್ ಮಾತನಾಡಿ, ಗ್ರಾಹಕರು ಯಾವುದೇ ವಸ್ತು, ಸರಕು ಮತ್ತು ಸೇವೆ ಪಡೆದ ನಂತರ ಸಮಸ್ಯೆ ಕಂಡು ಬಂದಲ್ಲಿ ಎರಡು ವರ್ಷದೊಳಗಾಗಿ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದರು.
ಹೋಟೆಲ್‌ಗಳಲ್ಲಿ ತಿನ್ನುವ ಆಹಾರ ಪದಾರ್ಥ ರುಚಿ ಮತ್ತು ಗುಣಮಟ್ಟ ಇಲ್ಲದಿದ್ದಲ್ಲಿ, ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಬಹುದು. ಮಾಲ್‌ಗಳಲ್ಲಿ ಯಾವುದೇ ವಸ್ತು ಅಥವಾ ಇನ್ನಿತರೆ ಸಾಮಾಗ್ರಿಗಳನ್ನು ಖರೀದಿ ಮಾಡಿದಾಗ ಅವುಗಳನ್ನು ಕೊಂಡೊಯ್ಯಲು ನೀಡುವ ಬ್ಯಾಗ್‌ಗಳಿಗೂ ಬೆಲೆ ನಿಗದಿ ಮಾಡಿರುತ್ತಾರೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಕ್ಯಾರಿ ಬ್ಯಾಗ್‌ಗಳನ್ನು ಉಚಿತವಾಗಿ ನೀಡಬೇಕು, ಇಲ ದಿದ್ದಲ್ಲಿ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲ ಎನ್.ಪ್ರಕಾಶ್ ಅವರು ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರ ಯುಗದಲ್ಲಿ ಗ್ರಾಹಕರ ರಕ್ಷಣೆ ಎಂಬ ವಿಷಯ ಮತ್ತು ಹಿರಿಯ ವಕೀಲರಾದ ಬಿ.ವೆಂಕಟೇಶ್ ಪ್ರಸಾದ್ ಅವರು ಗ್ರಾಹಕರ ಸಂರಕ್ಷಣಾ ಕಾಯ್ದೆ ೨೦೧೯ರ ಕಲಂ ೭೨ರ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯೆ ಮಾರ್ಲಾ ಶಶಿಕಲಾ, ಕಾನೂನು ಮಾಪನ ಶಾಸ್ತ್ರದ ಸಹಾಯಕ ನಿಯಂತ್ರಕ ಅಮೃತಾ ಪಿ.ಚವ್ಹಾಣ, ಜಿಲ್ಲಾ ಪರಿವೀಕ್ಷಣಾ ಘಟಕದ ಜಿಲ್ಲಾ ಅಂಕಿತಾಧಿಕಾರಿ ಡಾ.ಪ್ರಕಾಶ್ ಎಸ್.ಪುಣ್ಯಶೆಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನ, ಶ್ರೀಮೇಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮ್ ಕಿರಣ್, ಸಂಡೂರು ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಅಂಬಾದಾಸ್, ಬಳ್ಳಾರಿ ಬಾರ್ ಕೌನ್ಸಿಲ್‌ನ ಕಾರ್ಯದರ್ಶಿ ರವೀಂದ್ರ ಸೇರಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶ್ರೀಮೇಧಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button