ರಜೆ ಘೋಷಣೆಗೆ ಶಾಸಕ ಜನಾರ್ಧನರೆಡ್ಡಿ ಅಗ್ರಹ ರಾಮಮಂದಿರ ಉದ್ಘಾಟನೆ:ಅಂಜನಾದ್ರಿಯಲ್ಲಿ ಪೂಜೆ..
ಗಂಗಾವತಿ.
ಅಯೋಧ್ಯೆಯಲ್ಲಿ ಜ.೨೨ ರಂದು ಸೋಮವಾರ ಭವ್ಯ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಕಾರ್ಯ ನೇರವೇರುತ್ತಿರುವುದು ನಮಗೆ ಸಂತೋಷ ಸಂಗತಿಯಾಗಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಮಿತ್ಯ ಅಂಜನಾದ್ರಿ ಪರ್ವತದಲ್ಲೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಶ್ರೀರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್ ಸರಕಾರ ರಾಜಕಾರಣ ಬೆರಸಬಾರದು. ಮಂದಿರ ಉದ್ಘಾಟನೆಯ ಕ್ಷಣವನ್ನು ಪ್ರತಿಯೊಬ್ಬರು ಕಣ್ ತುಂಬಿಸಿಕೊಳ್ಳಲಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಸರಕಾರ ರಜೆ ಘೋಷಣೆ ಮಾಡಬೇಕು. ಸರಕಾರ ಘೋಷಣೆ ಮಾಡದಿದ್ದರೆ ಕನಿಷ್ಟ ಅಂಜನಾದ್ರಿ ಕ್ಷೇತ್ರವಾಗಿರುವ ಗಂಗಾವತಿ ತಾಲೂಕಿನಾದ್ಯಂತ ಎಲ್ಲಾ ಶಾಲಾ, ಕಾಲೇಜು ಮತ್ತು ಸರಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡುವಂತೆ ನಾನು ಜಿಲ್ಲಾಧಿಕಾರಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಭಾನುವಾರ ಅಂಜನಾದ್ರಿ ಪರ್ವತದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಕಳೆದ ಮೂರು ದಿನಗಳಿಂದ ವಿವಿಧ ಸಂಘ, ಸಂಸ್ಥೆಗಳಿಂದ ಅಂಜನಾದ್ರಿಯಲ್ಲಿ ಹಲವು ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಾಳೆ ಸೋಮವಾರ ಕೂಡಾ ಅಂಜನಾದ್ರಿಯಲ್ಲಿ ಬೆಳಗ್ಗೆಯಿಂದ ದೇವಸ್ಥಾನದಿಂದ ಹೋಮ, ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ತ್ರೀಕಾಲ ಪೂಜೆ ಸೇರಿದಂತೆ ರಾಮ ಮತ್ತು ಹನಮಂತನ ಸ್ಮರಣೆ ಮತ್ತು ಸಂಜೆ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಮತ್ತು ತೀರ್ಥ ಪ್ರಸಾದದ ವ್ಯವಸ್ಥೆ ಕೂಡಾ ಮಾಡಲಾಗುತ್ತಿದೆ. ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಟಾಪನೆಯ ನೇರ ದೃಶ್ಯವನ್ನು ಅಂಜನಾದ್ರಿ ಪರ್ವತದಲ್ಲೂ ಕಣ್ತುಂಬಿಕೊಳ್ಳಲು ಎಲ್‌ಇಡಿ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಭಕ್ತರು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಕರೆ ನೀಡಿದರು.
ಮುಂದುವರೆದು ಮಾತನಾಡಿದ ಅವರು ಅಂಜನಾದ್ರಿ ಪರ್ವತದ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಿದೆ. ಗಂಗಾವತಿಯಿಂದ ನೇರವಾಗಿ ರಸ್ತೆ ಅಭಿವೃದ್ಧಿಪಡಿಸಲು ಈಗಾಗಲೇ ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟಟ್ ಮಾಲಗಿತ್ತಿ, ಡಿವೈಎಸ್‌ಪಿ ಸಿದ್ಧನಗೌಡ ಪಾಟೀಲ್ ಇದ್ದರು.