ಶ್ರವಣಕುಮಾರ ರಾಯ್ಕರ್ ಕೆಆರ್‌ಪಿಪಿಗೆ ಗುಡ್‌ಬೈ.. ಬೆಂಗಳೂರಿನಲ್ಲಿ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆ

ಗಂಗಾವತಿ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಲಿ ಜನಾರ್ಧನರೆಡ್ಡಿ ಅವರ ಆಕರ್ಷಣೆಗೊಳಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾಗಿದ್ದ ಶ್ರವಣಕುಮಾರ ರಾಯ್ಕರ್ ಮರಳಿ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಮತ್ತೆ ತಮ್ಮ ಮಾತೃ ಪಕ್ಷ ಬಿಜೆಪಿ ಗೂಡು ಸೇರಿಕೊಂಡಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿರುವ ಶ್ರಣವಕುಮಾರ ರಾಯ್ಕರ್ ರಾಜಕೀಯವಾಗಿ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಗಾಲಿ ಜನಾರ್ಧನರೆಡ್ಡಿ ಅವರ ಕೆಆರ್‌ಪಿಪಿ ಸೇರ್ಪಡೆಯಾಗಿದ್ದರು. ಜನಾರ್ಧನರೆಡ್ಡಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮತ್ತು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಮುಂದುವರೆಯುವುದಕ್ಕಾಗಿ ಬಿಜೆಪಿಪರ ಕೆಲಸ ಮಾಡುವ ಹಿನ್ನೆಲೆಯಲ್ಲಿ ಮತ್ತೆ ಮಾತೃ ಪಕ್ಷಕ್ಕೆ ಶ್ರವಣಕುಮಾರ ರಾಯ್ಕರ್ ಮರಳಿದ್ದಾರೆ. ಈ ಕುರಿತು ಮಾತನಾಡಿದ ಅವರು ನರೇಂದ್ರ ಮೋದಿ ಅವರು ವಿಶ್ವ ಮೆಚ್ಚಿದ ನಾಯಕರಾಗಿದ್ದಾರೆ. ಮತ್ತೊಮ್ಮೆ ಅವರು ಪ್ರಧಾನಿಯಾಗಬೇಕು. ಹೀಗಾಗಿ ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ದೃಷ್ಟಿಯಿಂದ ನಾನು ಬಿಜೆಪಿ ಸೇರಿದ್ದೇನೆ. ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಹಿಂದಿನಂತೆ ಪ್ರೀತಿ, ವಿಶ್ವಾಸ ಹೊಂದಿ ಪಕ್ಷದ ಕೆಲಸದಲ್ಲಿ ತೊಡಗುತ್ತೇನೆ. ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಲೋಕಸಭೆ ಚುನಾವಣೆಯಲ್ಲಿ ಕೆಆರ್‌ಪಿಪಿಯಿಂದ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ಮಾಡುತ್ತಿದ್ದಾರೆ. ಬಿಜೆಪಿಗೆ ಬೆಂಬಲಿಸುವ ಕುರಿತು ಅವರಲ್ಲಿ ಇನ್ನು ಸ್ಪಷ್ಟತೆ ಇಲ್ಲ. ಹೀಗಾಗಿ ನಾನು ಪುನಃ ನನ್ನ ಮಾತೃ ಪಕ್ಷಕ್ಕೆ ಘರ್ ವಾಪಸ್ಸಾಗಿದ್ದೇನೆ ಎಂದರು.