Blog

ಸೌಹಾರ್ದತೆಗಾಗಿ ನಮ್ಮ ನಡೆ:ಸಿ.ಎಚ್.ನಾರಿನಾಳ್ ಜ.30 ಸೌಹಾರ್ದ ಅಭಿಯಾನ: ಮಾನವ ಸರಪಳಿ

ಗಂಗಾವತಿ.
ರಾಜಕಾರಣ ಮತ್ತು ಹಲವು ವೈಚಾರಿಕ ಸಂಘರ್ಷಗಳಿಂದ ಜನರಲ್ಲಿ ಸೌಹಾರ್ದತೆ ಹದೆಗೆಡುತ್ತಿದೆ. ಇಂತಹ ಸೌಹಾರ್ದತೆಯನ್ನು ಎಲ್ಲರಲ್ಲಿ ತರುವ ಪ್ರಯತ್ನಕ್ಕಾಗಿ ಜ.೩೦ ರಂದು ಗಂಗಾವತಿ ನಗರದಲ್ಲಿ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೌಹಾರ್ದತೆಗಾಗಿ ನಮ್ಮ ನಡೆಯಾಗಿದ್ದು, ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಬೇಕು ಎಂದು ಶರಣ ಚಿಂತಕ ಹಾಗೂ ಸೌಹಾರ್ದ ಕರ್ನಾಟಕ ಸಂಘಟನೆ ಅಧ್ಯಕ್ಷ ಸಿ.ಹೆಚ್.ನಾರಿನಾಳ ಹೇಳಿದರು.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಸಮಾನ ಮನಸ್ಕ ಚಿಂತಕರೆಲ್ಲರೂ ಸೇರಿ ಸೌಹಾರ್ದ ಕರ್ನಾಟಕ ಎಂಬ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ವೇದಿಕೆಯಡಿ ಪ್ರಥಮ ಬಾರಿಗೆ ಗಂಗಾವತಿಯಲ್ಲಿ ಸರ್ವ ಸಮುದಾಯ, ಸರ್ವ ಸಂಘಟನೆಗಳೊಂದಿಗೆ ಸೇರಿ ಜ.೩೦ ರಂದು ಸೌಹಾರ್ದ ಅಭಿಯಾನ ಆಯೋಜಿಸಿದೆ. ಸುಮಾರು ೨೦೦೦ ಜನರಿಂದ ನಗರ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನಡೆಸಲು ನಾವು ತಿರ್ಮಾನಿಸಿದ್ದೇವೆ. ಗಂಗಾವತಿ ನಗರದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸೌಹಾರ್ದ ಸಭೆ ನಡೆಸುವ ಮೂಲಕ ಜನರಲ್ಲಿ ಸೌಹಾರ್ದತೆಯ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.
ಸಂಘಟನೆಯ ಸಂಚಾಲಕ ಚಂದ್ರಪ್ಪ ಹೊಸಕೇರಿ ಮಾತನಾಡಿ, ಮಹಾತ್ಮಾಗಾಂಧಿ ಪುಣ್ಯಸ್ಮರಣೆಯ ಅಂಗವಾಗಿ ಜ.೩೦ ರಂದು ಗಂಗಾವತಿ ನಗರದಲ್ಲಿ ಸೌಹಾರ್ದ ಅಭಿಯಾನ ನಡೆಸಲಾಗುತ್ತಿದೆ. ಎಲ್ಲರಲ್ಲೂ ಸಾಮರಸ್ಯ ತರುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಸಾಹಿತಿ ಹಾಗೂ ಶಿಕ್ಷಕ ಅಜಮೀರ್ ನಂದಾಪುರ ಮಾತನಾಡಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸರ್ವ ಜನಾಂಗವನ್ನು ಜಾಗೃತಿಗೊಳಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಗಂಗಾವತಿಯಲ್ಲಿ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ, ಧರ್ಮ, ಸಂಘಟನೆಗಳನ್ನು ಒಂದುಗೂಡಿಸಿ ಗಂಗಾವತಿಯಲ್ಲಿ ಸೌಹಾರ್ದತೆ ತರಲು ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಚಾಲಕ ಗ್ಯಾನೇಶ್ ಕಡಗದ, ಸದಸ್ಯರಾದ ನಿರುಪಾದಿ ಬೆಣಕಲ್, ಶೇಖ್ ನಬೀ, ಬಾಳಪ್ಪ ಹುಲಿಹೈದರ್, ಮಂಜುನಾಥ, ಶಿವಕುಮಾರ ಮತ್ತಿತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button