ಮೋದಿಗೆ ಶಾಸಕ ರೆಡ್ಡಿ ಬೆಂಬಲ:ಬಿಜೆಪಿ ಸ್ವಾಗತ
ಗಂಗಾವತಿ.
ವಿಶ್ವ ಮೆಚ್ಚಿದ ನಾಯಕರಾಗಿ ಹೊರ ಹೊಮ್ಮಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಬೆಂಬಲ ನೀಡುವುದಾಗಿ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ನೀಡಿರುವ ಹೇಳಿಕೆಗೆ ಬಿಜೆಪಿ ನಗರ ಘಟಕ ಸ್ವಾಗತಿಸಿದೆ.
ಕಳೆದ ದಿನ ಗಣರಾಜ್ಯೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಧಾನಿ ಮೋದಿಗಾಗಿ ಬಿಜೆಪಿಗೆ ಬೆಂಬಲ ನೀಡುವ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿಕೆಗೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಹರ್ಷ ವ್ಯಕ್ತಪಡಿಸಿ ಸಮರ್ಥವಾಣಿಗೆ ತಮ್ಮ ಪ್ರತಿಕ್ರೀಯೆ ನೀಡಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶ ಮೆಚ್ಚುವಂತಹ ಆಡಳಿತ ನೀಡಿದ್ದಾರೆ. ದೇಶದ ಜನರ ಕಷ್ಟಗಳಿಗೆ ಸ್ಪಂದಿಸಿ ವಿಶ್ವವೇ ಮೆಚ್ಚುವಂತೆ ಭಾರತವನ್ನು ಬಲಿಷ್ಟಗೊಳಿಸಿದ್ದಾರೆ. ಈಗ ಈಡೀ ದೇಶದ ಜನರು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಬೇಕೆಂದು ಬಯಸುತ್ತಿದ್ದು, ಜನರ ಅಭಿಪ್ರಾಯಕ್ಕೆ ಈಗಾಗಲೇ ದೇಶದ ಹಲವು ರಾಜಕೀಯ ಪಕ್ಷಗಳು ಮತ್ತು ರಾಜ್ಯದ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಲು ಮುಂದಾಗಿದೆ. ಕರ್ನಾಟಕ ರಾಜ್ಯದಲ್ಲೂ ಮುಂದಿನ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕೈ ಬಲಪಡಿಸಲು ಭಾರತೀಯ ಜನತಾ ಪಕ್ಷ ಸಂಪೂರ್ಣ ಸಜ್ಜಾಗಿದೆ. ಅದೇ ರೀತಿ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಕೂಡಾ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಬಿಜೆಪಿಯೊಂದಿಗೆ ಕೈ ಜೋಡಿಸುವುದಾಗಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿರುವುದು ನಾವು ಸ್ವಾಗತಿಸುತ್ತೇವೆ. ಮತ್ತು ಮೋದಿ ಬಗ್ಗೆ ಅವರಲ್ಲಿರುವ ಅಭಿಮಾನಕ್ಕೆ ನಾವು ಜನಾರ್ಧನರೆಡ್ಡಿಯನ್ನು ಅಭಿನಂದಿಸುತ್ತೇವೆ. ಪ್ರಧಾನಿ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಮಂತ್ರಿಯಾಗಿ ಮುಂದುವರೆಯಲು ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಜನಾರ್ಧನರೆಡ್ಡಿ ಅವರು ಶ್ರಮಿಸಲು ಮುಂದಾಗಬೇಕು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಕೆಆರ್‌ಪಿಪಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಬಿಜೆಪಿಗೆ ಬೆಂಬಲ ನೀಡಬೇಕು. ದೇಶದ ಭದ್ರತೆ, ಅಭಿವೃದ್ಧಿಗಾಗಿ ಬಿಜೆಪಿಪರ ಕೆಲಸ ಮಾಡುವಂತೆ ಕಾಶಿನಾಥ ಚಿತ್ರಗಾರ ಮನವಿ ಮಾಡಿದ್ದಾರೆ.