ಮತದಾನ ಬಹಿಷ್ಕಾರಕ್ಕೆ ನಿವಾಸಿಗಳ ನಿರ್ಧಾರ- ಹಕ್ಕುಪತ್ರಕ್ಕಾಗಿ ಗಾಳೇಮ್ಮಗುಡಿ ಕ್ಯಾಂಪಿನಲ್ಲಿ ಪ್ರತಿಭಟನೆ- ಸಚಿವ ತಂಗಡಗಿ ಕ್ಷೇತ್ರದಲ್ಲಿ ಸೌಲಭ್ಯ ವಂಚಿತ ಕುಟುಂಬಗಳು..!!
ಗಂಗಾವತಿ.
ತಾಲೂಕಿನ ಮರಳಿ ಹೋಬಳಿಯ ಕನಕಗಿರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಭಟ್ಟರ್‌ಹಂಚಿನಾಳ ಗ್ರಾಮದ ಗಾಳೇಮ್ಮಗುಡಿಕ್ಯಾಂಪ್ ನಿವಾಸಿಗಳಿಗೆ ಕಳೆದ ಹಲವು ವರ್ಷಗಳಿಂದಲೂ ಹಕ್ಕುಪತ್ರ ನೀಡುವಲ್ಲಿ ಸಂಪೂರ್ಣ ನಿರ್ಲಕ್ಷವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ನಿವಾಸಿಗಳು ಮೇ.7 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಕ್ಕುಪತ್ರ ಇಲ್ಲದ ಕಾರಣ ನಮಗೆ ಸರಕಾರದ ಯಾವುದೇ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ. ಹತ್ತಾರು ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ಗ್ರಾಮ ಪಂಚಾಯತ್ ಮತ್ತು ಸಚಿವರಿಗೆ ಹಲವು ಮನವಿ ಮಾಡಿದ್ದರೂ ಯಾವುದೇ ರೀತಿಯ ಸ್ಪಂದನೆ ಇಲ್ಲದಂತಾಗಿದೆ. ಹೀಗಾಗಿ ಚುನಾವಣೆಯಲ್ಲಿ ಮತದಾನ ಬಹಿಸ್ಕರಿಸುವುದಾಗಿ ನಿರ್ಧರಿಸಿದ್ದಾರೆ. ಹಿಂದುಳಿದ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಅವರ ಕನಕಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಾಳೇಮ್ಮಗುಡಿ ಕ್ಯಾಂಪಿನ ನಿವಾಸಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು ಯಾವೊಬ್ಬ ಅಧಿಕಾರಿ ಕ್ಯಾಂಪಿನ ಮೂಲ ಸಮಸ್ಯೆಗಳ ಪರಿವಾಹಕ್ಕೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ.
ತಮ್ಮ ಗಾಳೆಮ್ಮಗುಡಿ ಕ್ಯಾಂಪಿನ ನಿವಾಸಿಗಳ ಪರವಾಗಿ ಗ್ರಾಮ ಪಂಚಾಯತ್ ಸದಸ್ಯ ರಾಜೇಶಕುಮಾರ ಮಾತನಾಡಿ, ನಮ್ಮ ಗಾಳೇಮ್ಮಗುಡಿ ಕ್ಯಾಂಪಿನಲ್ಲಿ ನೂರಾರು ಕುಟುಂಬಗಳು ಕಳೆದ ಹತ್ತಾರು ವರ್ಷಗಳಿಂದ ವಾಸವಾಗಿದ್ದಾರೆ. ವಾಸವಾಗಿರುವ ಭೂಮಿ ಸರಕಾರಕ್ಕೆ ಸೇರಿದೆ ಎಂಬುದು ನಿವಾಸಿಗಳ ವಾದವಾಗಿದೆ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಮಾಲೀಕತ್ವದಲ್ಲಿ ಈ ಜಮೀನು ಬರುತ್ತಿದೆ ಎಂದು ನ್ಯಾಯಾಲಯ ಮೊರೆ ಹೋಗಿದ್ದಾರೆ. ಈ ಮೊದಲು ತಾಪಂನಿಂದ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಆದರೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸೇರಿದಂತೆ, ಅಂಬೇಡ್ಕರ್ ವಸತಿ ನಿಗಮದಿಂದ ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷವಹಿಸಿರುವುದರಿಂದ ಹಕ್ಕುಪತ್ರ ಇಲ್ಲದೇ ನಿವಾಸಿಗಳು ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ. ಪ್ರತಿ ಭಾರಿ ನಡೆಯುವ ಚುನಾವಣೆಯಲ್ಲಿ ನಿವಾಸಿಗಳು ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸುತ್ತಾರೆ. ಎಲ್ಲಾ ಪಕ್ಷದ ಮುಖಂಡರು ಕೇವಲ ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗಮನಕ್ಕೆ ತಂದರೂ ಅವರು ಯಾವದೇ ರೀತಿಯ ಪರಿಹಾರ ಒದಗಿಸುವ ಕೆಲಸ ಮಾಡಿಲ್ಲ. ಸಮಸ್ಯೆ ಪರಿಹರಿಸಿ ನಿವಾಸಿಗಳ ಬೇಡಿಕೆ ಈಡೇರಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿಲ್ಲ. ಹೀಗಾಗಿ ಕ್ಯಾಂಪಿನ ಎಲ್ಲಾ ನಿವಾಸಿಗಳು ತಮ್ಮ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ಮೇ.೭ ರಂದು ನಡಯುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಸ್ಕರಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕ್ಯಾಂಪಿನ ನಿವಾಸಿಗಳಾದ ಸಿ. ನರಸಿಂಹಲು, ಕೆ.ಹುಸೇನಪ್ಪ, ಬಿ.ರವಿಕುಮಾರ್, ಬಜ್ಜಪ್ಪ, ಬಿ.ಜೇಮಿಸ್, ಬಂಡಿ ಇಂಜಪ್ಪ, ಸಿ. ನರಸಪ್ಪ, ಎಂ. ನರಸಿಂಹಲು, ದಾನೇಲು, ಜಿ. ಆನಂದ ಸೇರಿದಂತೆ ಮಹಿಳೆಯರು, ಯುವಕರು ಇದ್ದರು.