Blog

ಹೊಸಪೇಟೆ ಉತ್ತರಾದಿಮಠಕ್ಕೆ ದಲಿತರ ಪ್ರವೇಶ- ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ಅದ್ದೂರಿ ಸ್ವಾಗತ

ವಿಜಯನಗರ,ಏ.14
ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜಯಂತಿ ನಿಮಿತ್ತ ಸಂವಿಧಾನ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಉತ್ತರಾದಿಮಠಕ್ಕೆ ಭಾನುವಾರ ದಲಿತರು ಪ್ರವೇಶ ಮಾಡಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್ ಅವರ ನೇತೃತ್ವದಲ್ಲಿ ಶ್ರೀಮಠದ ಅರ್ಚಕರು ದಲಿತ ಮುಖಂಡರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ನಂತರ ಸಂವಿಧಾನ ಹೋರಾಟ ಸಮಿತಿಯ ಮುಖಂಡ ಮರಡಿ ಜಂಬಯ್ಯ ನಾಯಕ ಹಾಗೂ ವಕೀಲ ಎ. ಕರುಣಾನಿಧಿ ಮಾತನಾಡಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅವರು ಸಮಾನತೆಯನ್ನು ಸಾರಿದ್ದಾರೆ. ಮೊದಲು ನಮ್ಮ ಮನಸ್ಸುಗಳು ಒಂದಾಗಬೇಕು. ಹಾಗಾಗಿ ಅಂಬೇಡ್ಕರ್ ಅವರ ಜನ್ಮದಿನದ ನಿಮಿತ್ತ ಸೌಹಾರ್ದಯುತವಾಗಿ ಉತ್ತರಾದಿ ಮಠಕ್ಕೆ ಪ್ರವೇಶ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಶ್ರೀಮಠದವರು ಕೂಡ ನಮ್ಮನ್ನು ಅಷ್ಟೇ ಆದರದಿಂದ ಬರಮಾಡಿಕೊಂಡಿದ್ದಾರೆ. ನಾವೆಲ್ಲರೂ ಸೇರಿ ಸಮಾಜಕ್ಕೆ ಉತ್ತಮ ಸಂದೇಶ ನೀಡೋಣ, ಶಾಂತಿ, ಸಹಬಾಳ್ವೆಯಿಂದ ಎಲ್ಲರೂ ಒಂದಾಗಿ ಜೀವಿಸೋಣ. ಸಂವಿಧಾನದ ಆಶಯ ಉಳಿಸೋಣ ಎಂದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್ ಅವರು ಮಾತನಾಡಿ, ಯಾವತ್ತೂ ಕೂಡ ನಾವು ಎಂದಿಗೂ ಎಲ್ಲರ ಜೊತೆಗೆ ಇದ್ದೇವೆ. ಇಡೀ ಹೊಸಪೇಟೆ ಜನರು ಎಲ್ಲರೂ ಸೇರಿ ಊರಮ್ಮ ದೇವಿ ಜಾತ್ರೆಯನ್ನು ನಮ್ಮೂರ ಹಬ್ಬದಂತೇ ಆಚರಣೆ ಮಾಡಿದ್ದೇವೆ. ಹಾಗಾಗಿ ಹೊಸಪೇಟೆ ನಗರದಲ್ಲಿ ಎಂದಿಗೂ ಸೌಹಾರ್ದತೆಗೆ ಧಕ್ಕೆಯಾಗಿಲ್ಲ. ನಾವೆಲ್ಲರೂ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡೋಣ ಎಂದರು, ನಂತರ ಉತ್ತರಾದಿಮಠದಲ್ಲಿ ಎಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ಫಲ ಮತ್ತು ತೀರ್ಥ ಪ್ರಸಾದ ಸ್ವೀಕರಿಸಿದರು.
ಮುಖಂಡರಾದ ಆರ್.ಭಾಸ್ಕರ್‌ರೆಡ್ಡಿ, ವಿ. ಸ್ವಾಮಿ, ರಮೇಶ್, ಪವನ್, ಎನ್.ಯಲ್ಲಾಲಿಂಗ, ಬಿಸಾಟಿ ಮಹೇಶ್, ಧನರಾಜ್, ನಾಗಮ್ಮ, ದುರುಗಮ್ಮ, ಉತ್ತರಾದಿ ಮಠದ ಉಮರ್ಜಿ ರಾಮಾಚಾರ್ಯ, ಆನಂದಾಚಾರ್ಯ ಮಹಿಷಿ, ವ್ಯವಸ್ಥಾಪಕ ಕೃಷ್ಣಾಚಾರ್ಯ, ರಮೇಶ್ ನವರತ್ನ ಸೇರಿದಂತೆ ಮಠದ ಭಕ್ತರು ಮತ್ತಿತರರಿದ್ದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಪಿಐ ಲಖನ್ ಮಸಗುಪ್ಪಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button