ಆನೆಗೊಂದಿ ಉತ್ಸವದಲ್ಲಿ ಯಡವಟ್ಟು: ಬಿಸಾಕಿದ ಅನ್ನ ತಿಂದು ಕುರಿಗಳು ಸಾವು
ಗಂಗಾವತಿ.
ಎರಡು ದಿನ ಆನೆಗೊಂದಿ ಉತ್ಸವ ಆಚರಿಸಿದ ಜಿಲ್ಲಾಡಳಿತ ನಂತರ ನಿರ್ಲಕ್ಷ ಮಾಡಿದ ಪರಿಣಾಮ ಉತ್ಸವದಲ್ಲಿ ಜನರಿಗೆ ಊಟಕ್ಕೆ ಮಾಡಿದ್ದ ಅನ್ನವನ್ನು ಬಯಲಿನಲ್ಲಿ ಬಿಸಾಕಿದ್ದ ಅನ್ನವನ್ನು ತಿಂದ 20ಕ್ಕೂ ಹೆಚ್ಚು ಕುರಿಗಳು ಸಾವಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ಬೆಳೆಗ್ಗೆ ಆನೆಗೊಂದಿ ಉತ್ಸವದ ಹತ್ತಿರ ಇದ್ದ ಕುರಿ ಹಟ್ಟಿಯಲ್ಲಿ ಕುರಿ ಸಾವಪ್ಪಿರುವದನ್ನು ಕಂಡ ಕುರಿಗಾರರು ಬೆಚ್ಚಿ ಬಿದ್ದಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದು, ಬಿಸಾಕಿದ ಅನ್ನ ತಿಂದಿದ್ದರಿಂದ ಕುರಿಗಳು ಸಾವಪ್ಪಿವೆ ಎಂದು ದೃಢಪಡಿಸಿದ್ದಾರೆ. ಮಾ.11 ಮತ್ತು 12 ರಂದು ಎರಡು ದಿನ ಶಾಸಕ ಜನಾರ್ಧನರೆಡ್ಡಿ ನೇತೃತ್ವದಲ್ಲಿ ಜಿಲ್ಲಾಡಳಿತ ಆನೆಗೊಂದಿ ಉತ್ಸವ ಆಚಿರಿಸಿತ್ತು. ಉತ್ಸವಕ್ಕೆ ಬರುವ ಜನರಿಗೆ ಮುಖ್ಯರಸ್ತೆಯ ಗದ್ದೆಯ ಖಾಲಿ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಗಟ್ಟಲೆ ಜನ ಸೇರುತ್ತಾರೆ ಎಂಬ ನಿರೀಕ್ಷೆಯಿಂದ ಜಿಲ್ಲಾಡಳಿತ ಅಡುಗೆ ಮಾಡಿಸಿದ್ದು, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದ ಪರಿಣಾಮ ಮಾಡಿದ ಸಾಕಷ್ಟು ಅಡುಗೆ ಉಳಿದಿದೆ. ಆದರೆ ಉಳಿದ ಅನ್ನ, ಸಾಂಬಾರ್ ಮತ್ತು ಉಪ್ಪಿಟ್ಟು ಮತ್ತಿತರ ಪದಾರ್ಥವನ್ನು ವ್ಯವಸ್ಥಾಪಕರು ನಿರ್ಜನ ಸ್ಥಳ ಅಥವಾ ನೆಲದಲ್ಲಿ ಮುಚ್ಚಿ ಹಾಕದೆ ಬಯಲಿನಲ್ಲೇ ಬಿಸಾಕಿ ಹೋಗಿದ್ದಾರೆ. ಮರುದಿನ ಗುರುವಾರ ನೂರಾರು ಕುರಿಗಳು ಈ ಹೊಲದಲ್ಲಿ ಬಂದಿದ್ದು, ಬಿಸಾಕಿದ್ದ ಅನ್ನ ಮತ್ತಿತರ ಪದಾರ್ಥ ತಿಂದಿವೆ. ರಾತ್ರಿ ಉತ್ಸವದ ಪ್ರಮುಖ ವೇದಿಕೆಯ ಹತ್ತಿರ ಇದ್ದ ಹಟ್ಟಿಯಲ್ಲಿ ಏಕಾ ಏಕಿ ನೂರಾರು ಕುರಿಗಳು ಅಸ್ತವ್ಯವಸ್ಥವಾಗಿವೆ. ಅದರಲ್ಲಿ ಸುಮಾರು 20 ಕ್ಕೂ ಹೆಚ್ಚು ಕುರಿಗಳು ಸಾವಪ್ಪಿದ್ದು, ನೂರಕ್ಕು ಹೆಚ್ಚು ಕುರಿಗಳು ಅನಾರೋಗ್ಯದಿಂದ ಬಳಲುತ್ತಿವೆ. ಇದನ್ನು ಗಮನಿಸಿದ ಕುರಿ ಮಾಲೀಕರಾದ ತಿಮ್ಮಣ್ಣ ಚಿಕ್ಕ ಬೆಣಕಲ್, ಯಂಕಪ್ಪ ಮಲ್ಲಾಪುರ ಅವರು ತಕ್ಷಣ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಶುಕ್ರವಾರ ಬೆಳೆಗ್ಗೆ ಮುಖ್ಯ ಪಶು ವೈದ್ಯಾಧಿಕಾರಿ ಡಾ|| ಸೋಮಪ್ಪ ಮತ್ತವರ ತಂಡ ಆಗಮಿಸಿ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅದರಲ್ಲಿ 21 ಕುರಿಗಳು ಸಾವಪ್ಪಿರುವುದು ದೃಢಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಾ|| ಸೋಮಪ್ಪ ಅವರು ಆನೆಗೊಂದಿ ಉತ್ಸವದ ಸಾರ್ವಜನಿಕರಿಗಾಗಿ ಸಿದ್ಧಪಡಿಸಿದ್ದ ಅಡುಗೆಯನ್ನು ಬಬಯಲಿನಲ್ಲಿ ಬಿಸಾಕಿದ್ದಾರೆ. ಈ ಕೆಟ್ಟ ಪದಾರ್ಥವನ್ನು ತಿಂದಿರುವ ಕುರಿಗಳಿಗೆ ಆರೋಗ್ಯ ಸಮಸ್ಯೆಯಾಗಿದೆ. ಅದರಲ್ಲಿ 21 ಕುರಿಗಳು ಸಾವಪ್ಪಿವೆ. ಕುರಿಗಾರರು ಇದನ್ನು ಗಮನಿಸಿಲ್ಲ ಎಂದಿದ್ದಾರೆ. ಆದರೆ ಆಹಾರ ಪದಾರ್ಥವನ್ನು ಬಯಲಿನಲ್ಲಿ ಬಿಸಾಡದೇ ಮುಂಜಾಗೃತವಾಗಿ ಉಳಿದ ಪದಾರ್ಥವನ್ನು ನೆಲದಲ್ಲಿ ಮುಚ್ಚಿ ಹಾಕಿಬೇಕಿತ್ತು. ಅನ್ನ ತಿಂದ ಕುರಿಗಳು ಸಾವಪ್ಪಿವೆ ಎಂದು ಸ್ಪಷ್ಟನೆ ನೀಡಿದರಲ್ಲದೇ ಸಾವಪ್ಪಿದ ಕುರಿಗಳಿಗೆ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ|| ಝಾಕೀರ್ ಹುಸೇನ್, ಡಾ|| ಅರುಣಗುರು ಇದ್ದರು.
ವಿಷಯ ತಿಳಿದು ಮಾತನಾಡಿರುವ ಯಾದವ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ನ್ಯಾಯವಾದಿ ಹೆಚ್.ಸಿ.ಯಾದವ ಅವರು ಆನೆಗೊಂದಿ ಉತ್ಸವ ಆಚರಿಸಿದ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷವಹಿಸಿದೆ. ಉತ್ಸವ ನಂತರ ಉಳಿದ ಆಹಾರ ಪದಾರ್ಥವನ್ನು ಪಶು ಪ್ರಾಣಿಗಳಿಗೆ ಸಿಗದಂತೆ ನೆಲದಲ್ಲಿ ಮುಚ್ಚಿ ಹಾಕಬೇಕು. ಆದರೆ ಬಯಲಿನಲ್ಲೆ ಬಿಸಾಕಿರುವುದು ಈಗ ಕುರಿಗಳ ಸಾವಿಗೆ ಕಾರಣವಾಗಿದೆ. ಶಾಸಕರು ಮತ್ತು ಅಧಿಕಾರಿಗಳ ಸಮನ್ವಯ ಕೊರತೆಯಿಂದ ಆನೆಗೊಂದಿ ಉತ್ಸವದಲ್ಲಿ ಸಾಕಷ್ಟು ಎಡವಟ್ಟುಗಳಾಗಿವೆ. ತಕ್ಷಣ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸಾವಪ್ಪಿರುವ ಕುರಿಗಳಿಗೆ ಪರಿಹಾರ ಒದಗಿಸಬೇಕು. ಮತ್ತು ಆಹಾರ ಪದಾರ್ಥವನ್ನು ಬಯಲಿಗೆ ಬಿಸಾಕಲು ಕಾರಣವಾಗಿರುವ ಆಹಾರ ಸಮಿತಿ ಜವಬ್ದಾರಿವಹಿಸಿಕೊಂಡಿದ್ದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಾಕ್ಸ್:
ಕುರಿ ಸಾವಿಗೆ ಜಿಲ್ಲಾಡಳಿತ ಹೊಣೆ
ಆನೆಗೊಂದಿ ಉತ್ಸವ ಆಚರಿಸಿರುವ ಜಿಲ್ಲಾಡಳಿ ಸಾರ್ವಜನಿಕರಿಗೆ ಮಾಡಿದ್ದ ಆಹಾರ ಪದಾರ್ಥವನ್ನು ಸರಿಯಾಗಿ ನಿರ್ವಹಿಸಿಲ್ಲ. ಉಳಿದ ಅನ್ನ ಮತ್ತಿತರ ಪದಾರ್ಥವನ್ನು ಬಯಲಿಗೆ ಬಿಸಾಕಿ ಹೋಗಿದ್ದ ಪರಿಣಾಮ ಆಹಾರ ಅರಿಸಿಕೊಂಡು ಬಂದ ಕುರಿಗಳು ಅನ್ನ ತಿಂದು ಸಾವಪ್ಪಿವೆ. ಜಿಲ್ಲಾಡಳಿತ ನಿರ್ಲಕ್ಷವೇ ಪ್ರಮುಖ ಕಾರಣವಾಗಿದೆ. ತರಾತುರಿಯಲ್ಲಿ ಉತ್ಸವ ಆಚರಿಸಿ ಕೈತೊಳೆದುಕೊಂಡ ಜಿಲ್ಲಾಡಳಿತ ಕುರಿ ಸಾವಿಗೆ ಹೊಣೆಯಾಗಿದೆ. ಈ ಕುರಿತು ಕುರಿಗಾರರಿಗೆ ಸೂಕ್ತ ಪರಿಹಾ ಕೊಡಬೇಕು. ಮತ್ತು ಇಂತಹ ಘಟನೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು.
ಹೆಚ್.ಸಿ.ಯಾದವ, ವಕೀಲರು ಹಾಗೂ ಅಧ್ಯಕ್ಷರು, ತಾಲೂಕು ಯಾದವ ಸಮಾಜ, ಗಂಗಾವತಿ.