ಶಾಸಕ ರೆಡ್ಡಿ ಬೆಂಬಲಿಗರ ಅಧಿಕಾರಕ್ಕೆ ಅನ್ಸಾರಿ ಬ್ರೇಕ್..!! ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವ ರದ್ಧತಿಗೆ ಕಸರತ್ತು.
ಗಂಗಾವತಿ.
ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ತಮ್ಮ ಬೆಂಬಲಿಗರಿಗೆ ಕೊಡಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವದ ಅಧಿಕಾರಕ್ಕೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬ್ರೇಕ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ತಮ್ಮ ಕಾಂಗ್ರೆಸ್ ಪಕ್ಷದ ಸರಕಾರವಿದ್ದಾಗ ಅನ್ಯ ಪಕ್ಷದ ಕಾರ್ಯಕರ್ತರಿಗೆ ಗಂಗಾವತಿ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಿರುವುದನ್ನು ಸಹಿಸದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹಾಲಿ ಶಾಸಕ ಜನಾರ್ಧನರೆಡ್ಡಿ ಶಿಪಾರಸ್ಸಿನ ಆಧಾರದ ಮೇಲೆ ಉಪ ವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ|| ಈಶ್ವರ ಸವಡಿ ನೇಮಕ ಮಾಡಿರುವ ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವದ ಆದೇಶವನ್ನು ರದ್ದುಪಡಿಸಲು ತೆರೆ ಮರೆಯಲ್ಲಿ ಕಸರತ್ತು ನಡೆಸಿರುವುದು ಈಗ ಬೆಳಕಿಗೆ ಬಂದಿದೆ.
ಶಾಸಕ ಜನಾರ್ಧನರೆಡ್ಡಿ ಅವರು ತಮ್ಮ ವ್ಯಾಪ್ತಿಗೆ ಬರುವ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಮೂಲಕ ಆಸ್ಪತ್ರೆ ವೈದ್ಯಾಧಿಕಾರಿ ಡಾ|| ಈಶ್ವರ ಸವಡಿ ಅವರಿಂದ ಜ.೧೧ ರಂದು ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶ್ರೀಧರ ಕಲ್ಮನಿ, ಮಂಜುನಾಥ ಕೊಲ್ಕಾರ್, ರವಿಕುಮಾರ ಯಲಬುರ್ತಿ, ಎ.ಭಾರತಿ, ಮಹ್ಮದ್ ಆಸೀಫ್, ಟಿ.ಜಿ.ಬಾಬು, ಶಿವರಾಜ ಚೆನ್ನಳ್ಳಿ(ಹೊಸಳ್ಳಿ) ಮತ್ತು ಹನುಮಂತ ಮೂಳೆ ಅವರನ್ನು ನಾಮ ನಿರ್ದೇಶನ ಮಾಡಿ ಆದೇಶ ಮಾಡಿಸಿದ್ದರು. ಈ ಎಲ್ಲಾ ಸದಸ್ಯರಿಗೆ ಜ.೧೧ ರಂದು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದೇಶ ಪತ್ರವನ್ನು ವಿತರಣೆ ಮಾಡಿದ್ದರು. ಮತ್ತು ಆಸ್ಪತ್ರೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜ.೧೧ ರಂದು ಸಭೆ ನಡೆಸಲು ತಿರ್ಮಾನಿಸಿದ್ದರು. ಆದರೆ ಶಾಸಕ ಜನಾರ್ಧನರೆಡ್ಡಿ ಶಿಪಾರಸ್ಸಿನಂತೆ ಕೆಆರ್‌ಪಿಪಿ ಮುಖಂಡರಿಗೆ ನೀಡಿದ್ದ ನಾಮ ನಿರ್ದೇಶನ ಸದಸ್ಯತ್ವದ ಆದೇಶವನ್ನು ಅರಿತ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ತಮ್ಮ ಗಮನಕ್ಕೆ ತರದೇ ಕೆಆರ್‌ಪಿಪಿ ಮುಖಂಡರಿಗೆ ನೇಮಕ ಮಾಡಿರುವುದಕ್ಕೆ ಗರ್ಂ ಆಗಿ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತು ಆಯುಕ್ತರ ಮೂಲಕ ಈ ಆದೇಶವನ್ನು ರದ್ದುಪಡಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಈಗ ಕಾಂಗ್ರೆಸ್ ಮತ್ತು ಕೆಆರ್‌ಪಿಪಿ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಳೆದ ಜ.೧೧ ರಂದು ತಮಗೆ ನಾಮ ನಿರ್ದೇಶನ ಮಾಡಿರುವ ಆದೇಶದ ಪ್ರತಿ ಸಿಕ್ಕಿದ್ದರೂ ಹಾಲಿ, ಮಾಜಿ ಶಾಸಕರ ರಾಜಕೀಯ ಪ್ರತಿಷ್ಟೆಯಿಂದಾಗಿ ಈಗ ಅದನ್ನು ಬಹಿರಂಗಪಡಿಸಲು ಆಗುತ್ತಿಲ್ಲ ಎಂದು ಕೆಆರ್‌ಪಿಪಿ ಪಕ್ಷದ ಮತ್ತು ನೂತನ ಆರೋಗ್ಯ ರಕ್ಷಾ ಸಮಿತಿ ನಾಮ ನಿರ್ದೇಶನ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕ ಜನಾರ್ಧನರೆಡ್ಡಿ ಶಿಪಾರಸ್ಸಿನಂತೆ ಮತ್ತು ಆರೋಗ್ಯ ಇಲಾಖೆಯ ಆಯುಕ್ತರ ಸೂಚನೆ ಮೆರೆಗೆ ಉಪ ವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಕೆಆರ್‌ಪಿಪಿ ಪಕ್ಷದ ಮುಖಂಡರಿಗೆ ನೀಡಿದ್ದ ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವದ ಆದೇಶವನ್ನು ಮುಂದುವರೆಸುತ್ತಾರೋ ಅಥವಾ ರದ್ದುಪಡಿಸಿ ಅನ್ಸಾರಿ ಸೂಚನೆ ಮಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಾರೋ ಕಾದು ನೋಡಬೇಕಿದೆ. ಒಟ್ಟಾರೆ ಗಂಗಾವತಿ ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ರಾಜಕೀಯ ಜಿದ್ದಾ ಜಿದ್ಧಿ ಮತ್ತು ಕಾಂಗ್ರೆಸ್, ಕೆಆರ್‌ಪಿಪಿ ಕಾರ್ಯಕರ್ತರ ರಾಜಕೀಯ ಪ್ರತಿಷ್ಟೆಯಿಂದಾಗಿ ಗಂಗಾವತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.