ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವ ಆದೇಶ ರದ್ದು..!! ಅನ್ಸಾರಿ ಮೇಲುಗೈ: ಶಾಸಕ ಜನಾರ್ಧನರೆಡ್ಡಿಗೆ ಮುಖಭಂಗ
ಗಂಗಾವತಿ.
ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಒಂದು ವಾರದ ಹಿಂದೆ ತಮ್ಮ ಎಂಟು ಜನ ಬೆಂಬಲಿಗರಿಗೆ ನೀಡಿದ್ದ ಉಪ ವಿಭಾಗ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ನಾಮ ನಿರ್ದೇಶನ ಸದಸ್ಯತ್ವವನ್ನು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ರದ್ದುಪಡಿಸುವಲ್ಲಿ ಮೇಲುಗೈ ಸಾಧಿಸಿದ್ದು, ಜನಾರ್ಧನರೆಡ್ಡಿಗೆ ಮುಖಭಂಗವಾಗಿದೆ. ಜ.೧೧ ರಂದು ಶಾಸಕರ ಶಿಪಾರಸ್ಸಿನಂತೆ ಉಪ ವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ|| ಈಶ್ವರ ಸವಡಿ ತಾವೇ ನೇಮಕ ಮಾಡಿದ್ದ ಆರೋಗ್ಯ ರಕ್ಷ ಸಮಿತಿ ಸದಸ್ವತದ ಆದೇಶವನ್ನು ರುದ್ದುಪಡಿಸಿದ್ದಾರೆ.
ಶಾಸಕ ಜನಾರ್ಧನರೆಡ್ಡಿ ಬೆಂಬಲಿಗ ಕೆಆರ್‌ಪಿಪಿ ಪಕ್ಷದ ಮುಖಂಡರಿಗೆ ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ಪತ್ರದ ಪ್ರತಿಯನ್ನು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಗಂಗಾವತಿ ವಿಧಾನ ಸಭೆ ಕ್ಷೇತ್ರದಲ್ಲಿ ಗಾಲಿ ಜನಾರ್ಧನರೆಡ್ಡಿ ಶಾಸಕರಾಗಿದ್ದಾರೆ. ಆದರೆ ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವುದರಿಂದ ಗಂಗಾವತಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸೋತಿದ್ದರೂ ಸರಕಾರ ಮಟ್ಟದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಮಾತೆ ಅಂತಿಮವಾಗುತ್ತಿದೆ. ಸರಕಾರದಿಂದ ನಾಮ ನಿರ್ದೇಶನಗೊಳ್ಳುವ ಎಲ್ಲಾ ಹುದ್ದೆಗಳು ಅನ್ಸಾರಿ ಸೂಚಿಸುವ ವ್ಯಕ್ತಿಗಳಿಗೆ ಕಾಂಗ್ರೆಸ್ ಸರಕಾರ ನೀಡುವ ಮುನ್ಸೂಚನೆ ನೀಡಿದೆ. ಹಾಲಿ ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗುವ ಆರೋಗ್ಯ ರಕ್ಷಾ ಸಮಿತಿ, ವಿವಿಧ ಶಾಲಾ, ಕಾಲೇಜುಗಳು ಅಭಿವೃದ್ಧಿ ಸಮಿತಿ, ಆರಾಧನ, ಆಶ್ರಯ ಮತ್ತಿತರ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಅವಕಾಶ ಶಾಸಕರಿಗೆ ಇದೆ. ಶಾಸಕರು ಶಿಪಾರಸ್ಸು ಮಾಡಿ ಸರಕಾರದ ಉನ್ನತ ಹುದ್ದೆಯಲ್ಲಿರುವ ನಿರ್ದೇಶಕರು ಅಥವಾ ಆಯುಕ್ತರ ಮೂಲಕ ತಮ್ಮ ಬೆಂಬಲಿಗರಿಗೆ ಸದಸ್ಯತ್ವವ ನೀಡಬೇಕಾಗಿರುವುದು ಸಹಜ ಪ್ರಕ್ರೀಯೆಯಾಗಿದೆ. ಆದರೆ ಗಂಗಾವತಿ ಕ್ಷೇತ್ರದಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅಧಿಕಾರಕ್ಕೆ ಬ್ರೇಕ್ ಹಾಕಲು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತಮ್ಮ ಪಕ್ಷದ ರಾಜ್ಯ ಸರಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಮೇಲೆ ಒತ್ತಡ ಹಾಕಿ ಕಳೆದ ಜ.೧೧ ರಂದು ನೇಮಕ ಮಾಡಿದ್ದ ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವವನ್ನು ರದ್ದುಪಡಿಸುವಲ್ಲಿ ಇಕ್ಬಾಲ್ ಅನ್ಸಾರಿ ಮೇಲುಗೈ ಸಾಧಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಶಿಪಾರಸ್ಸಿನಂತೆ ಆರೋಗ್ಯ ಇಲಾಖೆ ಆಯುಕ್ತರ ಮೂಲಕ ಮತ್ತೊಮ್ಮೆ ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವ ನೇಮಕ ಮಾಡಲಾಗುವುದು ಎಂದು ವೈದ್ಯಾಧಿಕಾರಿ ಡಾ|| ಈಶ್ವರ ಸವಡಿ ಅವರು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಹಾಲಿ, ಮಾಜಿ ಶಾಸಕರ ಮುಸುಕಿನ ಗುದ್ದಾಟದಲ್ಲಿ ಹಾಲಿ ಶಾಸಕ ಜನಾರ್ಧನರೆಡ್ಡಿಗೆ ಹಿನ್ನಡೆಯಾಗಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರಿಗೆ ದೊರಕಿದ್ದ ಅಧಿಕಾರ ಈಗ ರದ್ದಾಗಿದ್ದು, ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರದೇ ದರ್ಬಾರ್ ನಡೆಯುತ್ತದೆ ಎಂಬ ಸಂಗತಿ ಆರೋಗ್ಯ ರಕ್ಷಾ ಸಮಿತಿ ಸದಸ್ಯತ್ವ ನೇಮಕ ಮತ್ತು ರದ್ದು ಪ್ರಕರಣದಿಂದ ಸಾಬೀತಾಗಿದೆ. ಈ ಕುರಿತು ಹಾಲಿ ಶಾಸಕ ಜನಾರ್ಧನರೆಡ್ಡಿ ಮುಂದೆ ಯಾವ ನಡೆ ಅನುಸರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.