ಆನೆಗೊಂದಿ ಉತ್ಸವ ಸ್ಥಳಕ್ಕೆ ನಮ್ಮ ಅನುಮತಿ ಪಡೆದಿಲ್ಲ.. ಜಿಲ್ಲಾಡಳಿತ ವಿರುದ್ಧ ರೈತ ಸೋಮಪ್ಪ ಆಕ್ರೋಶ
ಗಂಗಾವತಿ.
ತಾಲೂಕಿನ ಆನೆಗೊಂದಿಯಲ್ಲಿ ಮಾ.೧೧ ಮತ್ತು ೧೨ರಂದು ಆಯೋಜಿಸಿರುವ ಉತ್ಸವದ ಜಾಗ ಸರ್ವೆ ನಂ.೨೧೮ರಲ್ಲಿ ೩ ಎಕರೆ ೧೭ ಗುಂಟಿ ಪ್ರದೇಶ ನಮ್ಮ ಸ್ವಂತ ಕೃಷಿ ಭೂಮಿಯಾಗಿದೆ. ಈ ಸ್ಥಳದಲ್ಲಿ ಉತ್ಸವ ನಡೆಸುವ ಮುಂಚೆ ಜಿಲ್ಲಾಧಿಕಾರಿ ಅಥವಾ ಶಾಸಕರು ನಮ್ಮ ಅನುಮತಿ ಪಡೆದಿಲ್ಲ. ಈ ಕುರಿತು ನಾನು ತಹಶೀಲ್ದಾರರ ಗಮನಕ್ಕೆ ತಂದಿದ್ದರೂ ಅವರು ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಭೂಮಾಲೀಕನ ಸಹೋದರ ರೈತ ಸೋಮಪ್ಪ ಯಲಬುರ್ಗಿ ನಮ್ಮ ಅನುಮತಿ ಇಲ್ಲದೇ ಉತ್ಸವ ಆಯೋಜಿಸುತ್ತಿರುವ ಜಿಲ್ಲಾಡಳಿತದ ವಿರುದ್ಧ ಕೋರ್ಟ್ ಮೊರೆ ಹೋಗುತ್ತೇನೆ ಎಂದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಆನೆಗೊಂದಿ ಹೊರ ಹೊಲಯದಲ್ಲಿ ಪ್ರಮುಖ ವೇದಿಕೆ ನಿರ್ಮಿಸಿ ಉತ್ಸವ ಆಚರಿಸುವ ೩ ಎಕರೆ ೧೭ ಗುಂಟೆ ಕೃಷಿ ಭೂಮಿ ನನ್ನ ಸಹೋದರ ಆವಪ್ಪ ತಂದೆ ಗುರಪ್ಪ ಸಜ್ಜನ್‌ಗೆ ಸೇರಿದೆ. ನನ್ನ ಸಹೋದರ ಆವಪ್ಪಗೆ ಬೈಪಾಸ್ ಸರ್ಜರಿ ಆಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ನಾನು ಗಂಗಾವತಿಯ ಹಿರೇಜಂತಕಲ್ ನಿವಾಸಿಯಾಗಿರುವ ಸೋಮಪ್ಪ ಯಲಬುರ್ಗಿ ಉತ್ಸವ ದಿನಾಂಕ ನಿಶ್ಚಯ ಮಾಡುತ್ತಿದ್ದಂತೆ ತಹಶೀಲ್ದಾರ ಮತ್ತು ಕಂದಾಯ ನಿರೀಕ್ಷಕರ ಗಮನಕ್ಕೆ ತಂದಿದ್ದೇನೆ. ಅವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಅನುಮತಿ ಪಡೆಯುತ್ತೇವೆ ಎಂದು ಮೌಖಿಕವಾಗಿ ತಿಳಿಸಿದ್ದರು. ಆದರೆ ಈಗ ನಮ್ಮ ಅನುಮತಿ ಪಡೆಯದೇ ನಮ್ಮ ಭೂಮಿಯಲ್ಲಿ ಆನೆಗೊಂದಿ ಉತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವೇದಿಕೆಯಿಂದ ಅಂದಾಜು ೧೦೦ ಅಡಿ ನಂತರ ಬರುವ ೩.೧೭ ಎಕರೆ ಜಮೀನು ನನ್ನ ಸಹೋದರಿಗೆ ಸೇರಿದೆ. ಈ ಹಿಂದೆ ಆನೆಗೊಂದಿ ಉತ್ಸವ ಆಚರಿಸುವ ಸಂದರ್ಭದಲ್ಲಿ ಅಂದು ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಮತ್ತು ಜಿಲ್ಲಾಧಿಕಾರಿಗಳು ಈ ಭೂಮಿಯಲ್ಲಿ ಇದ್ದ ಬಾಳೆ ಬೆಳೆಯನ್ನು ನಾಶ ಮಾಡಿ ನನ್ನ ಅನುಮತಿ ಪಡೆದು ಉತ್ಸವ ಆಚರಿಸಿದ್ದರು. ಬೆಳೆ ಹಾನಿಗೆ ನನಗೆ ಪರಿಹಾರ ನೀಡಿದ್ದರು. ಉತ್ಸವ ಆಚರಣೆಯಿಂದಾಗಿ ಈ ಭೂಮಿಯಲ್ಲಿನ ಕೃಷಿ ಮಾಡಲು ಸಮಸ್ಯೆಯಾಗಿತ್ತು. ಅಲ್ಲಿದ್ದ ಪೈಪ್‌ಗಳು ಸಂಪೂರ್ಣ ಹಾನಿಯಾಗಿದ್ದವು. ಈ ಹಿಂದೆ ಏಕಾ ಏಕಿ ಈ ಭೂಮಿ ಸರಕಾರದ್ದು ಎಂದು ಪಹಣಿಯಲ್ಲಿ ನಮೂದಾಗಿತ್ತು. ಆದರೆ ನಾವು ನ್ಯಾಯಾಲಕ್ಕೆ ಹೋಗಿ ನಮ್ಮ ತಿದ್ದುಪಡಿಯಾಗಿದ್ದ ದಾಖಲೆಗಳನ್ನು ಪುನಃ ನಮ್ಮ ಹೆಸರಿಗೆ ಮಾಡಿಕೊಂಡಿದ್ದೇವೆ. ಭೂಮಾಲೀಕ ನನ್ನ ಸಹೋದರ ಆವಪ್ಪಗೆ ಆರೋಗ್ಯ ಸಮಸ್ಯೆಯಿಂದಾಗಿ ಕಳೆದ ಎರಡು ವರ್ಷ ಯಾವುದೇ ಕೃಷಿ ಮಾಡಿಲ್ಲ. ಆದರೆ ಉತ್ಸವ ಆಚರಿಸುವ ಮುಂಚೆ ಜಿಲ್ಲಾಧಿಕಾರಿಗಳು ಅಥವಾ ಶಾಸಕರು ಭೂ ಮಾಲೀಕರ ನಮಗೆ ಸೌಜನ್ಯಕ್ಕಾದರೂ ಮಾಹಿತಿ ನೀಡದಿರುವುದು ಬೇಸರವಾಗಿದೆ. ಈ ಭೂಮಿಯ ಮೇಲೆ ಬ್ಯಾಂಕಿನಲ್ಲಿ ಸಾಲ ಕೂಡಾ ಇದೆ. ಈ ಭೂಮಿ ನಮ್ಮ ಮಾಲೀಕತ್ವದ್ದು ಎಂಬ ಸಂಗತಿ ತಹಶೀಲ್ದಾರರು ಮತ್ತು ಕಂದಾಯ ನಿರೀಕ್ಷಕರಿಗೆ ಸಂಪೂರ್ಣ ಮಾಹಿತಿ ಇದೆ. ಆದರೂ ಉತ್ಸವ ಆಚರಿಸುವ ಕುರಿತು ಇದುವರೆಗೂ ನಮ್ಮೊಂದಿಗೆ ಚರ್ಚಿಸಿಲ್ಲ. ಹೀಗಾಗಿ ನಾವು ಕೋರ್ಟ್ ಮೋರೆ ಹೋಗಿ ನಮ್ಮ ಭೂಮಿಯಲ್ಲಿ ಯಾವುದೇ ಕಾರ್ಯಕ್ರಮ ಆಚರಿಸದಂತೆ ತಡೆಯಾಜ್ಞೆ ತರಲು ನಿರ್ಧರಿಸಿದ್ದೇವೆ. ಕನಕಗಿರಿ ಉತ್ಸವ ಆಚರಿಸಬೇಕಾದರೆ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿ ಸ್ಥಳ ನೀಡಿದವರ ಅನುಮತಿ ಪಡೆದು ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಆದರೆ ಆನೆಗೊಂದಿ ಉತ್ಸವ ಆಚರಿಸಲು ಮುಂದಾಗಿರುವ ಜಿಲ್ಲಾಧಿಕಾರಿಗಳು, ಶಾಸಕರು ಕನಿಷ್ಟ ಸೌಜನ್ಯಕ್ಕಾದರೂ ನಮ್ಮೊಂದಿಗೆ ಮಾತನಾಡದಿರುವುದು ನಮಗೆ ಬೇಸರವಾಗಿದೆ ಎಂದರು.
ಬಾಕ್ಸ್:
ಕೋರ್ಟ್ ಮೋರೆ ಹೋಗಲು ನಿರ್ಧಾರ
ನಮ್ಮ ಭೂಮಿಯಲ್ಲಿ ಆನೆಗೊಂದಿ ಉತ್ಸವ ಆಚರಿಸಲು ಮುಂದಾಗಿರುವ ಜಿಲ್ಲಾಡಳಿತದ ವಿರುದ್ಧ ನಾವು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ. ಈ ಕುರಿತು ನಮ್ಮ ವಕೀಲರೊಂದಿಗೆ ಚರ್ಚಿಸಿದ್ದೇವೆ. ನಮ್ಮ ಒಡೆತನದ ಭೂಮಿಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿರುವ ಅಧಿಕಾರಿಗಳು, ಶಾಸಕರಿಗೆ ಸೌಜನ್ಯಕ್ಕಾದರೂ ನಮ್ಮೊಂದಿಗೆ ಚರ್ಚಿಸುವ ಕೆಲಸ ಮಾಡಿಲ್ಲ. ಹೀಗಾಗಿ ನ್ಯಾಯಾಲದ ಮೊರೆ ಹೋಗಿ ತಡೆಯಾಜ್ಞೆ ತರಲು ನಿರ್ಧರಿಸಿದ್ದೇವೆ.
ಸೋಮಪ್ಪ ಯಲಬುರ್ಗಿ, ರೈತ, ಹಿರೇಜಂತಕಲ್, ಗಂಗಾವತಿ.
ಬಾಕ್ಸ್:
ಭೂ ಮಾಲೀಕನೊಂದಿಗೆ ಮಾತನಾಡಿದ್ದೇನೆ.
ಆನೆಗೊಂದಿ ಉತ್ಸವ ಆಚರಿಸುವ ಸ್ಥಳ ಖಾಸಗಿ ರೈತನಿಗೆ ಸೇರಿದೆ. ಈ ಭೂ ಮಾಲೀಕನ ಸಹೋದರೊಂದಿಗೆ ನಾನು ಮೌಖಿಕವಾಗಿ ಅನುಮತಿ ಪಡೆಯಲು ಮಾತನಾಡಿದ್ದೇನೆ. ಶಾಸಕರ ಗಮನಕ್ಕೂ ತಂದಿದ್ದೇನೆ. ಇನ್ನೊಮ್ಮೆ ರೈತರೊಂದಿಗೆ ಮಾತನಾಡುತ್ತೇವೆ.
ಯು.ನಾಗರಾಜ, ತಹಶೀಲ್ದಾರ, ಗಂಗಾವತಿ.