ಹನುಮ ಧ್ವಜ ತೆರವು ಖಂಡಿಸಿ ಕೆಆರ್‌ಪಿಪಿ ಪ್ರತಿಭಟನೆ ಹನುಮ ಭಕ್ತರ ಭಾವನೆಗೆ ಕಾಂಗ್ರೆಸ್‌ನಿಂದ ಧಕ್ಕೆ
ಕೊಪ್ಪಳ.
ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಬೃಹತ್ ಕಂಬವನ್ನು ನಿಲ್ಲಿಸಿ ಅಲ್ಲಿ ಸಮಸ್ಥ ಗ್ರಾಮಸ್ಥರೆಲ್ಲರೂ ಸೇರಿ ಹಾಕಿದ್ದ ಹನುಮ ಧ್ವಜವನ್ನು ಕಾಂಗ್ರೆಸ್ ಸರಕಾರ ತೆರವು ಮಾಡಿರುವುದು ಖಂಡನೀಯವಾಗಿದೆ. ಕಾಂಗ್ರೆಸ್ ಸರಕಾರ ಹನುಮಂತ ಭಕ್ತರ ಮೇಲೆ ಕೆಂಗಣ್ಣು ಬೀರಿದೆ. ಹನುಮಂತನಿಗೆ ಅನ್ಯಾಯ ಮಾಡಿರುವುದನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ನಡೆದ ಘಟನೆಯನ್ನು ಖಂಡಿಸಿ ಅವರು ನಗರದಲ್ಲಿ ಕೆಆರ್‌ಪಿಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಕೆರೆಗೋಡು ಗ್ರಾಮದಲ್ಲಿ ಗ್ರಾಮದ ಜನರು ಸೇರಿ ಹನುಮಂತನ ಆರಾಧನೆ ನಿಮಿತ್ಯ ಹನುಮ ಧ್ವಜ ಹಾಕಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಹನುಮ ಧ್ವಜವನ್ನು ತೆರವು ಮಾಡಿ ಹನುಮ ಭಕ್ತರ ಭಾವನೆ ಧಕ್ಕೆ ತಂದಿದೆ. ರಾಮನ ಬಂಟ ಹನುಮಂತ ಕನ್ನಡ ನಾಡಿನಲ್ಲಿ ಜನಿಸಿರುವುದು ಸಮಸ್ಥ ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯವಾಗಿದೆ. ಇಂತಹ ಹನುಮಂತನಲ್ಲಿ ಕೇವಲ ಕರ್ನಾಟಕವಷ್ಟೇ ಅಲ್ಲ ದೇಶದ ಪ್ರತಿಯೊಂದು ಗ್ರಾಮ, ಗಲ್ಲಿಯಲ್ಲಿ ಹನುಮಂತನ ದೇವಸ್ಥಾನಗಳ ಮೂಲಕ ಹನುಮಂತನ ಸ್ಮರಣೆ ಮಾಡುತ್ತಾರೆ. ಆದರೆ ಕಾಂಗ್ರೆಸ್ ಸರಕಾರ ಹನುಮ ಧ್ವಜ ತೆರವು ಮಾಡಿ ಆಂಜನೇಯನಿಗೆ ಅವಮಾನ ಮಾಡಿದೆ. ತಕ್ಷಣ ಸರಕಾರ ಕ್ಷಮೆ ಯಾಚಿಸಿ ಕೆರೆಗೋಡು ಗ್ರಾಮದಲ್ಲಿ ಪುನಃ ಹನುಮ ಧ್ವಜ ಹಾಕಬೇಕು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ, ಮುಖಂಡರಾದ ರಾಜೇಶ್ ರೆಡ್ಡಿ, ಮಾಲಬಾಯಿ ನಾಯಕ್ ಮಂಜುನಾಥ್ ಗೊಂದಿ, ಪ್ರವೀಣ ಮಂಗಳಾಪುರ, ರಾಮಣ್ಣ ನಾಯ್ಕ್, ವೆಂಕಟೇಶ್ ಇಳಿಗೇರ್, ಪಂಪಾಪತಿ ಹಿರೇಮಠ ಕಿನ್ನಾಳ, ಕೆ.ರಾಘಣ್ಣ ಕಿನ್ನಾಳ, ಮಂಜುನಾಥ್ ಕಲಾಲ್, ಬಸು ಕುಮಾರ್ ಪಟ್ಟಣಶೆಟ್ಟಿ, ಶರಣು ಓಜನಹಳ್ಳಿ, ಮಹಾಂತಮ್ಮ, ಈರಮ್ಮ, ವಿಜಯಲಕ್ಷ್ಮಿ, ಲತಾಶ್ರಿ, ಜ್ಯೋತಿ, ಮಂಜು ಜನಾದ್ರಿ, ರಮೇಶ್ ಮತ್ತಿತರು ಇದ್ದರು.