ಮತ್ತು ಬರುವ ಮಾತ್ರೆ ಪೂರೈಕೆ:ಪ್ರಕರಣ ದಾಖಲು- ಪೇನ್ ಕಿಲ್ಲರ್ ಹೆಸರಿನ ಮಾತ್ರೆ ಪತ್ತೆ
ಗಂಗಾವತಿ.
ಹದಿ ಹರೆಯದ ಯುವಕರಿಗೆ ಮತ್ತು ಬರುವಂತಹ ಮಾತ್ರೆ ವಿತರಣೆ ಮಾಡುತ್ತಿರುವ ಆರೋಪದಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಟಗಿ ತಾಲೂಕಿನ ಕೊಕ್ಕರಗೊಳ ಗ್ರಾಮದ ಸಂದೀಪಗೌಡ ತಂದೆ ಅಮರೇಗೌಡ ಪೊಲೀಸ್ ಪಾಟೀಲ್ ಎಂಬ ೨೪ ವರ್ಷದ ಯುವಕನನ್ನು ಬಂಧಿಸಿ ವಿಚಾರಣೆಗೆ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಕಳೆದ ಎ.೧೮ ರಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತಾಲೂಕಿನ ಹೊಸಕೇರಿ ಗ್ರಾಮದ ದನದ ವ್ಯಾಪಾರ ಮಾಡುತ್ತಿರುವ ಇಮಾಮ್‌ಸಾಬ್ ಬುಡನ್‌ಸಾಬ್ ಎಂಬ ವ್ಯಕ್ತಿ ನೀಡಿರುವ ದೂರಿನ್ನು ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಮ್ಮ ಮಗ ೨೪ ವರ್ಷ ಖಲಿಮುಲ್ಲಾನ ಆರೋಗ್ಯ ಸಮಸ್ಯೆಯಾಗಿದ್ದ ಸಂದರ್ಭದಲ್ಲಿ ಆರೋಪಿ ಹೊಸಕೇರಿ ಗ್ರಾಮಕ್ಕೆ ಬರುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ಮಗನಿಗೆ ಮಾತ್ರೆ ವಿತರಣೆ ಮಾಡಿದ್ದಾನೆ. ಆರೋಪಿ ನೀಡುವ ಮಾತ್ರೆ ಸೇವನೆಯಿಂದ ಮತ್ತು ಬರುತ್ತಿರುವುದು ಕಂಡು ಬಂದಿದೆ. ಮಗ ಈ ಮಾತ್ರೆ ಸೇವನೆಯ ಗೀಳಿಗೆ ಬಿದ್ದಿದ್ದು, ಆರೋಪಿಯನ್ನು ಕಳೆದ ಎರಡು ದಿನಗಳ ಹಿಂದೆ ಗಂಗಾವತಿ ಜಂಗಮರ ಕಲ್ಗುಡಿ ಸಮೀಪದ ವಿಚಾರಿಸಿದ ಸಂದರ್ಭದಲ್ಲಿ ಟ್ಯಾಪ್ಡ್ರೋ-೧೦೦ ಎಂಬ ಹತ್ತು ಮಾತ್ರೆಗಳ ಸಮೇತ ಸಿಕ್ಕಿ ಬಿದ್ದಿದ್ದು, ತಮ್ಮ ಮಗನಿಗೆ ಈ ಮಾತ್ರೆ ನೀಡುತ್ತಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಹೊಸಕೇರಿಯ ಬುಡನ್‌ಸಾಬ್ ದೂರು ನೀಡಿದ್ದಾನೆ. ದೂರನ್ನು ಪರಿಶೀಲಿಸಿರುವ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಗ್ರಾಮೀಣ ಠಾಣೆ ಪಿಐ ಅವರು ದೂರಿನ ಆದಾರದ ಮೇಲೆ ಪ್ರಕರಣ ದಾಖಲಿಸಿ ಮಾತ್ರೆ ವಿತರಣೆ ಮಾಡುವ ಯುವಕನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಯುವಕರ ಪೂರೈಸುತ್ತಿರುವ ಮಾತ್ರೆಗಳು ಪೇನ್ ಕಿಲ್ಲರ್ ಎಂಬುದು ಮೇಲ್ನೋಟಕ್ಕೆ ತಿಳಿದಿದೆ. ಈ ಮಾತ್ರೆ ಸೇವನೆಯಿಂದ ಮತ್ತು ಬರುತ್ತಿದೆ ಎಂಬುದು ದೂರುದಾರರ ಆರೋಪವಾಗಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕುರಿತು ಸಾಮಾಜಿಕ ಕಾರ್ಯಕರ್ತ ನಗರದ ಬಿ.ಕೆ.ಮಹ್ಮದ್ ಅಲ್ತಫ್ ಹುಸೇನ್ ಮಾತನಾಡಿ, ಗಂಗಾವತಿಯಲ್ಲಿ ಹಲವು ಯುವಕರು ಈ ರೀತಿಯ ಮಾತ್ರೆ ಸೇವನೆಯ ಚಟಕ್ಕೆ ಬಲಿಯಾಗುತ್ತಿದ್ದಾರೆ. ಕೆಲವು ಮೆಡಿಕಲ್ ಅಂಗಡಿಗಳಲ್ಲಿ ಪೇನ್ ಕಿಲ್ಲರ್ ಎಂಬ ಮಾತ್ರೆ ಎಂದು ಬಿಂಬಿಸಿ ಡ್ರಗ್ಸ್‌ನಂತಹ ಮಾದಕ ವಸ್ತು ಇರುವ ಮಾತ್ರೆ ಹಂಚಿಕೆ ಮಾಡುತ್ತಿದ್ದಾರೆ. ಈಗ ಪ್ರಕರಣ ಹೊರ ಬಂದಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಯುವಕರು ಮಾತ್ರೆ ಸೇವನೆ ಹೆಸರಿನಲ್ಲಿ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪೊಲೀಸರು ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮಾತ್ರೆಗಳು ಎಲ್ಲಿಂದ ಪೂರೈಕೆಯಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿ ಸಂಬಂಧಿಸಿದ ಮೆಡಿಕಲ್ ಅಂಗಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರಲ್ಲದೇ ಮಾದಕ ವ್ಯಸನಿಗಳಿಂದ ಸಮಾಜದಲ್ಲಿ ಅಶಾಂತಿ, ಹಲ್ಲೆ ಮತ್ತಿತರ ಘಟನೆ ನಡೆಯಲು ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
—————————