Blog

ಮಾ.೧೧,೧೨ ಆನೆಗೊಂದಿ ಉತ್ಸವ: ಜನಾರ್ಧನರೆಡ್ಡಿ ಹೇಳಿಕೆ.. ಅದ್ದೂರಿ ಆಚರಣೆಗೆ ಸಿದ್ಧತೆ: ಖ್ಯಾತ ಕಲಾವಿದರು ಆಗಮನ- ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಗಡ್ಕರಿಗೆ ಅಹ್ವಾನ

ಗಂಗಾವತಿ.
ಕ್ಷೇತ್ರದ ಮತ್ತು ಜಿಲ್ಲೆಯ ಎಲ್ಲಾ ಜನರ ಆಪೇಕ್ಷೆಯಂತೆ ತಾಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವವನ್ನು ಮಾ.೧೧ ಮತ್ತು ೧೨ ರಂದು ಆಚರಿಸಲು ಈಗಾಗಲೇ ನಿರ್ಧರಿಸಲಾಗಿದೆ. ಎರಡು ದಿನ ನಡೆಯುವ ಈ ಉತ್ಸವದಲ್ಲಿ ಹಂಸಲೇಖಾ, ದೃವ ಸರ್ಜಾ, ಅರ್ಜುನ ಜನ್ಯಾ ಸೇರಿದಂತೆ ರಾಜ್ಯ ಮತ್ತು ಸ್ಥಳೀಯ ಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಅಹ್ವಾನಿಸಲಾಗುತ್ತಿದೆ. ಜೊತೆಗೆ ಸಮಾರೋಪದಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಅಹ್ವಾನಿಸುತ್ತಿದ್ದು, ಅವರಿಂದ ಅಂಜನಾದ್ರಿಗೆ ರೊಪವೇ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಲು ಮನವಿ ಮಾಡಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಶನಿವಾರ ನಗರಸಭೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಆನೆಗೊಂದಿ ಉತ್ಸವವನ್ನು ವಿಶೇಷವಾಗಿ ಆಚರಿಸಲು ಚಿಂತನೆ ನಡೆಸಿದ್ದೇನೆ. ರೂ.೫ ಕೋಟಿ ಅನುದಾನ ನೀಡುವಂತೆ ನಾನು ಮನವಿ ಮಾಡಿದ್ದೇನೆ. ಕನಿಷ್ಟ ರೂ.೩ ಕೋಟಿ ಅನುದಾನದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬಜೆಟ್ ಅಧಿವೇಶನ, ರಾಜ್ಯಸಭಾ ಸದಸ್ಯರ ಚುನಾವಣೆ ನಿಮಿತ್ಯವಾಗಿ ಮಾಧ್ಯಮಗಳಿಗೆ ನಾನು ಈ ಮಾಹಿತಿ ನೀಡುವಲ್ಲಿ ವಿಳಂಬವಾಗಿದೆ. ಆದರೆ ಉತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಕಲಾವಿದರಿಗೆ ಅಹ್ವಾನ ನೀಡಲಾಗಿದೆ. ಜೊತೆಗೆ ಉತ್ಸವದ ಲಾಂಚನವನ್ನು ಬಿಡುಗಡೆ ಮಾಡಲಾಗಿದೆ. ಉತ್ಸವದ ಯಶಸ್ವಿಯಾಗಿ ಇಂದಿನಿಂದ ನಾನು ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲಿದ್ದು, ಪ್ರತಿ ನಿತ್ಯ ಅಧಿಕಾರಿಗಳು ಮತ್ತು ಸ್ಥಳೀಯ ಜನರು, ಸಂಘ, ಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸಲಾಗುವುದು. ಎರಡು ದಿನ ಕ್ರೀಡಾಕೂಟಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇತ್ತೀಚಿಗೆ ನಿಧನರಾಗಿರುವ ರಾಜವಂಶಸ್ಥರು ಮತ್ತು ಮಾಜಿ ಶಾಸಕರಾಗಿದ್ದ ದಿ|| ಶ್ರೀರಂಗದೇವರಾಯಲು ಅವರ ಹೆಸರಿನಲ್ಲಿ ವೇದಿಕೆ ಮಾಡುವ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು. ಸಮಯದ ಅಭಾವದಿಂದ ಕೆಲವೊಂದು ಕಾರ್ಯಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ವಿವೇಚೆನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರೆಡ್ಡಿ ಮಾಹಿತಿ ನೀಡಿದರು.
ಮುಂದುವರೆದು ಮಾತನಾಡಿದ ಅವರು ಅಂಜನಾದ್ರಿ ಅಭಿವೃದ್ಧಿಗೆ ಈ ಹಿಂದಿನ ಸರಕಾರ ರೂ.೧೦೦ ಕೋಟಿ ಅನುದಾನ ನೀಡಿತ್ತು. ಕೆಕೆಆರ್‌ಡಿಬಿಯಿಂದ ರೂ.೪೦ ಕೋಟಿ ಮತ್ತು ಈ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ರೂ.೧೦೦ ಕೋಟಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಸಿದ್ಧಪಡಿಸಿರುವ ಯೋಜನೆಯಂತೆ ಅಲ್ಲಿ ಕಾಮಗಾರಿಗಳು ಪ್ರಾರಂಭಿಸಲಾಗುತ್ತದೆ. ಕೇಂದ್ರ ಸರಕಾರ ರೊಪವೇಗೆ ರೂ.೧೧ ಕೋಟಿ ಅನುದಾನ ನೀಡಿದೆ. ಈ ರೊಪವೇ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಆನೆಗೊಂದಿ ಉತ್ಸವ ಸಂದರ್ಭದಲ್ಲಿ ಕೇಂದ್ರ ಸಚಿವ ಗಡ್ಕರಿ ಅವರಿಂದ ಭೂಮಿಪೂಜೆ ಮಾಡಿಸುವ ಕುರಿತು ಚಿಂತನೆ ಮಾಡಿದ್ದೇನೆ. ರೋಪವೇಗೆ ರೂ.೮೦ ಕೋಟಿ ಕೇಂದ್ರ ಸರಕಾರ ನೀಡಿದೆ ಎಂದು ಇತ್ತೀಚಿಗೆ ಕೆಲವರು ಹೇಳಿಕೆ ನೀಡಿರುವುದುನ್ನು ನಾನು ಗಮನಿಸಿದ್ದು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ರೂ.೧೧ ಕೋಟಿ ಎಂಬುದು ನನಗೆ ಸ್ಪಷ್ಟತೆ ಇದೆ. ಒಟ್ಟಾರೆಯಾಗಿ ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಅನುದಾನ ನೀಡುವಂತೆ ನಾನು ಪ್ರಯತ್ನಿಸುತ್ತಿದ್ದೇನೆ. ಪ್ರತಿ ವರ್ಷ ರೂ.೧೦೦ ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಜನಾರ್ಧನರೆಡ್ಡಿ ಸ್ಪಷ್ಟಪಡಿಸಿದ ಅವರು ಅಂಜನಾದ್ರಿ ಮತ್ತು ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಅನುದಾನ ನೀಡುತ್ತಾರೆ ಎಂಬ ಕಾರಣಕ್ಕೆ ನಾನು ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲಿಸಿಲ್ಲ. ಆತ್ಮಸಾಕ್ಷಿಗನುಗುಣವಾಗಿ ಮತ ಹಾಕಿದ್ದೇನೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂದು ದೇಶದ ಜನರು ಬಯಸುತ್ತಿದ್ದಾರೆ. ಜನರ ಇಚ್ಚೆಯಂತೆ ನಾನು ಮೋದಿಗೆ ಅವಕಾಶ ನೀಡಬೇಕೆಂದು ಹೇಳಿದ್ದೇನೆ. ಆನೆಗೊಂದಿ ಉತ್ಸವದ ನಂತರ ಲೋಕಸಭೆ ಚುನಾವಣೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂದು ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ನಗರಸಭೆ ಸದಸ್ಯ ರಮೇಶ ಚೌಡ್ಕಿ, ಮುಖಂಡ ಚಂದ್ರು ಹಿರೂರು, ವಿರೇಶ ಬಲಕುಂದಿ, ದುರಗಪ್ಪ ದಳಪತಿ, ಯಮನೂರ ಚೌಡ್ಕಿ, ರಮೇಶ ನಾಯಕ ಹೊಸಮಲಿ, ಪಂಪಣ್ಣ ನಾಯಕ, ಬಾಷಾ, ಜಿಲಾನಿ ಪಾಷಾ, ವಿರೇಶ ಸುಳೇಕಲ್ ಮತ್ತಿತರು ಇದ್ದರು.
ಬಾಕ್ಸ್:
ನಗರದ ಅಭಿವೃದ್ಧಿಗೆ ಅನುದಾನ
ಗಂಗಾವತಿ ನಗರದ ಅಭಿವೃದ್ಧಿಗೆ ನಾನು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ನಗರೋತ್ಥಾನ ನಾಲ್ಕನೇ ಹಂತದ ರೂ.೪೦ ಕೋಟಿ ಯೋಜನೆ ಕಾಮಗಾರಿಗೆ ಕೊರ್ಟ್‌ನಲ್ಲಿ ತಡೆ ನೀಡಲಾಗಿತ್ತು. ಈಗ ತಡೆ ತೆರವುಗೊಂಡಿದ್ದು, ಅಭಿವೃದ್ಧಿಗೆ ಇದ್ದ ಅಡೆತಡೆ ಪರಿಹಾರವಾಗಿದೆ. ಅನುದಾನ ಬಳಕೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರ ನಗರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. ಜುಲೈನಗರದಿಂದ ನೀಲಕಂಠೇಶ್ವರ ವೃತ್ತದವರೆಗಿನ ರಸ್ತೆ ಕಾಮಗಾರಿಗೆ ತಂದಿದ್ದ ತಡೆಯನ್ನು ತೆರವು ಮಾಡಲು ಅರ್ಜಿದಾರರು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿಗೆ ಅಡ್ಡಿಪಡಿಸದಂತೆ ಅವರೊಂದಿಗೆ ಮಾತುಕತೆ ಮಾಡಿದ್ದೇನೆ. ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭವಾಗಲಿದೆ. ಗಂಗಾವತಿ ನಗರದ ಅಭಿವೃದ್ಧಿಗೆ ನಾನು ವಿಶೇಷ ಯೋಜನೆ ರೂಪಿಸಿದ್ದೇನೆ. ಜನತೆ ಸಹಕಾರ ನೀಡಬೇಕು.
ಗಾಲಿ ಜನಾರ್ಧನರೆಡ್ಡಿ, ಶಾಸಕರು, ಗಂಗಾವತಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!