ಲಕ್ಷ್ಮೀನಾರಾಯಣ ಕೆರೆಯಲ್ಲಿ ಅಕ್ರಮ ಮಣ್ಣು ಎತ್ತುವಳಿ-ಕಣ್ಣುಮುಚ್ಚಿ ಕುಳಿತ ತಹಶೀಲ್ದಾರ ಮತ್ತು ಪಿಡಿಓ..!! ರಾತ್ರಿ ಟಿಪ್ಪರ್‌ಗಳ ಭಯಾನಕ ಸಂಚಾರ: ಜನರ ಆತಂಕ
ಗಂಗಾವತಿ.
ತಾಲೂಕಿನ ಆನೆಗೊಂದಿ ರಸ್ತೆಯಲ್ಲಿ ಬರುವ ಸಂಗಾಪುರ ಸೀಮಾ ವ್ಯಾಪ್ತಿಯ ಐತಿಹಾಸಿಕ ಲಕ್ಷ್ಮೀನಾರಾಯಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ಅಗೆದು ಅನ್ಯ ಜಾಗಕ್ಕೆ ಎತ್ತುವಳಿ ಮಾಡುತ್ತಿರುವುದು ಕಳೆದ ಒಂದು ವಾರದಿಂದ ನಡೆಯುತ್ತಿದೆ. ಮಧ್ಯ ರಾತ್ರಿಯಾಗುತ್ತಿದ್ದಂತೆ ಕೆರೆಯಲ್ಲಿನ ಮಣ್ಣನ್ನು ಬೃಹದಾಕಾರದ ಟಿಪ್ಪರ್‌ಗಳಲ್ಲಿ ಸಾಗಿಸಲಾಗುತ್ತಿದೆ. ಕೆರೆಯ ಮಣ್ಣು ಹೊತ್ತ ಟಿಪ್ಪರ್‌ಗಳು ಗಂಗಾವತಿ ನಗರದ ಬಸ್ ನಿಲ್ದಾಣದ ಮುಂಬಾಗದ ಪ್ರಮುಖ ರಸ್ತೆಯ ಮೂಲಕ ಸಂಚರಿಸುತ್ತಿವೆ. ಟಿಪ್ಪರ್‌ಗಳ ಭಯಾನಕ ಸಂಚಾರಕ್ಕೆ ಜನರು ಅಪಘಾತದ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮರಮ್ ಸಾಗಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದರೂ ತಹಶೀಲ್ದಾರ ಮತ್ತು ಗ್ರಾಪಂ ಪಿಡಿಓ ಕಣ್ಣು ಮುಚ್ಚಿ ಕುಳಿತಿದ್ದಾರೆ. ತಮ್ಮ ಕಣ್ಣೆದುರಿಗೆ ಟಿಪ್ಪರ್‌ಗಳ ಮೂಲಕ ಹಗಲು ರಾತ್ರಿ ಮಣ್ಣು ಸಾಗಿಸುತ್ತಿದ್ದರೂ ತಮಗೆ ಇದರ ಮಾಹಿತಿ ಇಲ್ಲ ಎಂದು ಸಬೂಬು ನೀಡುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಆನೆಗೊಂದಿ ರಸ್ತೆಯಲ್ಲಿ ಸಂಗಾಪುರ ಹತ್ತಿರ ಲಕ್ಷ್ಮೀನಾರಾಯಣ ಕೆರೆಯಲ್ಲಿನ ಮಣ್ಣನ್ನು ಕಂಡ ಕಂಡವರು ಎತ್ತುವಳಿ ಮಾಡುತ್ತಿರುವುದು ಎಗ್ಗಿಲ್ಲದೇ ನಡೆಯುತ್ತಿದೆ. ಲಕ್ಷ್ಮೀನಾರಾಯಣ ಕೆರೆ ನಗರಕ್ಕೆ ಅತ್ಯಂತ ಸಮೀಪವಿದ್ದು, ಈ ಕೆರೆಯವರೆಗೂ ನಗರದ ಮತ್ತು ಸಂಗಾಪುರ ಗ್ರಾಮದ ಜನರು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳುತ್ತಾರೆ. ಹೀಗಾಗಿ ಈ ಕೆರೆಯನ್ನು ಅಭಿವೃದ್ಧಿಪಡಿಸಬೇಕೆಂದು ಕೆಲವು ಪರಿಸರ ವಾದಿಗಳು ಶಾಸಕರು ಮತ್ತು ಜಿಲ್ಲಾಡಳಿತಕ್ಕೆ ಅಗ್ರಹಿಸುತ್ತಾ ಬರುತ್ತಿದ್ದಾರೆ. ಹತ್ತಾರು ಎಕೆರೆ ವಿಸ್ತೀರ್ಣ ಹೊಂದಿರುವ ಈ ಕೆರೆಯಲ್ಲಿ ಫಲವತ್ತಾದ ಎರೆ ಮಣ್ಣು ಸಂಗ್ರವಾಗಿದೆ. ಮುಂಗಾರ ಹಂಗಾಮಿನಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗುತ್ತದೆ. ಕೆರೆಯಲ್ಲಿ ಕಸ, ಕಡ್ಡಿ ಬೆಳೆದು ಜನರ ಕಣ್ಣಿಗೆ ಕಾಣುತ್ತಿಲ್ಲ. ಆದರೆ ಕೆರೆಯಲ್ಲಿನ ಫಲವತ್ತಾದ ಮಣ್ಣು ಕಂಡ ಕಂಡವರ ಪಾಲಾಗುತ್ತಿದೆ. ಕೆರೆಯಲ್ಲಿ ನಿತ್ಯ ನೂರಾರು ಟಿಪ್ಪರ್‌ಗಳು, ಜೆಸಿಬಿ ಮೂಲಕ ಮಣ್ಣನ್ನು ತುಂಬಿಕೊಂಡು ಹೊರ ಹೊಲಯಕ್ಕೆ ಸಾಗಿಸುತ್ತಿವೆ. ಮಣ್ಣು ತುಂಬಿದ ಟಿಪ್ಪರ್ ಎಲ್ಲಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮಾತ್ರ ಗೌಪ್ಯವಾಗಿ ಇಡಲಾಗಿದೆ. ಕೆರೆಯ ಹತ್ತಿರದಲ್ಲಿರುವ ಶಾಲೆಯ ಆವರಣದಲ್ಲಿ ಕೂಡಾ ಮಣ್ಣನ್ನು ಸಮಗ್ರಹಿಸುತ್ತಿರುವುದು ಮಾತ್ರ ಕಣ್ಣಿಗೆ ಕಾಣುತ್ತಿದೆ.
ಕೆರೆಯಲ್ಲಿ ಮಣ್ಣು ಅಗೆಯಬೇಕಾದರೆ ಗಣಿ ಮತ್ತು ಭೂ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅನುಮತಿ ಅತ್ಯವಶ್ಯವಿದೆ. ಜೊತೆಗೆ ಕಂದಾಯ ಇಲಾಖೆಯ ಜವಬ್ದಾರಿ ಹೊತ್ತಿರುವ ತಹಶೀಲ್ದಾರರು ಮತ್ತು ಸಂಬಂಧಿಸಿದ ಸಂಗಾಪುರ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಇದರ ಮಾಹಿತಿ ಮತ್ತು ಅನುಮತಿ ನೀಡಿರುವ ಪತ್ರದ ಮಾಹಿತಿ ಸಲ್ಲಿಸಬೇಕು. ಆದರೆ ತಹಶೀಲ್ದಾರ ಮತ್ತು ಪಿಡಿಓ ಅವರು ಮಣ್ಣು ಎತ್ತುವಳಿ ಮಾಡುತ್ತಿರುವ ಸಂಗತಿ ನಮಗೆ ತಿಳಿದಿಲ್ಲ ಎಂದು ಮಾಧ್ಯಮಗಳಿಗೆ ಸಬೂಬು ನೀಡುತ್ತಿದ್ದಾರೆ. ತಮ್ಮ ಕಚೇರಿ ಮುಂಬಾಗದಲ್ಲೇ ಹಗಲು ರಾತ್ರಿ ಟಿಪ್ಪರ್‌ಗಳು ಓಡಾಡುತ್ತಿದ್ದರೂ ತಹಶೀಲ್ದಾರ ಅಥವಾ ಕಂದಾಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಜೊತೆಗೆ ಈ ಕೆರೆಯ ಪಕ್ಕದಲ್ಲೇ ನಿತ್ಯ ತಮ್ಮ ಗ್ರಾಪಂ ಪಂಚಾಯತ್‌ಗೆ ತೆರಳುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೂಡಾ ಇದರ ಬಗ್ಗೆ ವಿಚಾರಿಸಲು ಕಿಂಚಿತ್ ಕಾಳಜಿವಹಿಸಿಲ್ಲ. ಆದರೆ ಇವರೆಲ್ಲರಿಗೂ ಕೆರೆಯ ಮಣ್ಣು ಸಾಗಿಸುತ್ತಿರುವುದ ಸಂಪೂರ್ಣ ಮಾಹಿತಿ ಇದೆ. ಮಣ್ಣು ಸಾಗಿಸುತ್ತಿರುವ ವ್ಯಕ್ತಿಗಳಿಂದ ಭಕ್ಷೀಸು ಬರುತ್ತಿದೆ. ಹೀಗಾಗಿ ಅವರು ಗೊತ್ತಿದ್ದರೂ ಗೊತ್ತಿಲ್ಲದೇ ನಟನೆ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ರಾಜಕುಮಾರ ಸೇರಿದಂತೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣ ಗಮನ ಹರಿಸಿ ಕೆರೆಯ ಮಣ್ಣು ಅನ್ಯರ ಪಾಲಾಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕೆರೆಯಲ್ಲಿನ ಮಣ್ಣು ಸಾಗಿಸುತ್ತಿರುವ ಟಿಪ್ಪರ್‌ಗಳು ಗಂಗಾವತಿ ನಗರದಲ್ಲಿ ಹಾದು ಹೋಗುತ್ತಿವೆ. ಈ ಟಿಪ್ಪರ್‌ಗಳು ರಾತ್ರಿ ಸಮಯದಲ್ಲಿ ಎರ್ರಾ ಬಿರ್ರಿ ಸಂಚರಿಸುತ್ತಿದ್ದು, ಜಾನುವಾರುಗಳು ಅಪಘಾತಕ್ಕಿಡಾಗಿವೆ. ರಾತ್ರಿ ಬಸ್‌ಗೆ ಬರುವ ಪ್ರಯಾಣಿಕರು ಟಿಪ್ಪರ್‌ಗಳ ಭಯಾನಕ ಸಂಚಾರ್ ನೋಡಿ ಆತಂಕಗೊಂಡಿದ್ದಾರೆ. ನಗರಸಭೆ ಮತ್ತು ಸಂಚಾರಿ ಪೊಲೀಸರು ಗಮನ ಹರಿಸಿ ಟಿಪ್ಪರ್ ಸಂಚಾರಕ್ಕೆ ಕಡಿವಾಣ ಹಾಕಬೇಕು. ಕೆರೆ ಅಭಿವೃದ್ಧಿಪಡಿಸುವ ಉದ್ದೇಶವಿದ್ದರೇ ಕದ್ದು ಮುಚ್ಚಿ ನಿಯಮ ಉಲ್ಲಂಘಿಸಿ ಹೂಳು ತೆಗೆಸುವ ಬದಲು ಸಂಬಂಧಿಸಿ ಇಲಾಖೆ ಮೂಲಕ ಸಕ್ರಮವಾಗಿ ಮಣ್ಣನ್ನು ಎತ್ತುವಳಿ ಮಾಡಿ ಸರಕಾರಕ್ಕೆ ಆದಾಯ ಬರುವಂತೆ ರಾಯಲ್ಟಿ ಪಡೆಯಬೇಕು ಎಂದು ಎಂದು ರೈತರು ಅಗ್ರಹಿಸುತ್ತಿದ್ದಾರೆ.
ಬಾಕ್ಸ್:
ಕೆರೆ ಮಣ್ಣು ಎತ್ತುತ್ತಿರುವುದು ನನಗೆ ಗೊತ್ತಿಲ್ಲ
ಸಮೀಪದ ಲಕ್ಷ್ಮೀನಾರಾಯಣ ಕೆರೆಯಲ್ಲಿನ ಮಣ್ಣನ್ನು ಟಿಪ್ಪರ್ ಮೂಲಕ ಎತ್ತುವಳಿ ಮಾಡುತ್ತಿರುವ ಮಾಹಿತಿ ನನ್ನ ಗಮನಕ್ಕೆ ಇಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿರುವ ಬಗ್ಗೆಯೂ ನನಗೆ ಯಾವುದೇ ಪತ್ರ ನೀಡಿಲ್ಲ. ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಯು.ನಾಗರಾಜ, ತಹಶೀಲ್ದಾರ, ಗಂಗಾವತಿ.
ಬಾಕ್ಸ್:
ಮಣ್ಣು ಎತ್ತುವಳಿ ತಕ್ಷಣ ಸ್ಥಗಿತಗೊಳಿಸುತ್ತೇವೆ
ಲಕ್ಷ್ಮೀನಾರಾಯಣ ಕೆರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿಯಮಾನುಸಾರ ಕೆರೆ ಹೂಳು ಎತ್ತಲು ಅನುಮತಿ ನೀಡಬೇಕು. ಮಣ್ಣು ಸಾಗಾಣೆ ಮಾಡುವ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗದಂತೆ ಮಣ್ಣು ಸಾಗಾಣೆ ಮಾಡಬೇಕು. ಆದರೆ ಟಿಪ್ಪರ್‌ಗಳನ್ನು ರಾತ್ರಿ ಸಮಯದಲ್ಲಿ ಮಣ್ಣು ಎತ್ತುವಳಿ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ ಎಂಬ ದೂರು ಬರುತ್ತಿವೆ. ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಕತ್ಷಣ ಮಣ್ಣು ಎತ್ತುವಳಿ ಮಾಡುವುದನ್ನು ಸ್ಥಗಿತಗೊಳಿಸಲಾಗುವುದು.
ರಾಮು ನಾಯಕ, ಪಿಡಿಓ, ಗ್ರಾಪಂ ಸಂಗಾಪುರ.