ಕೊಪ್ಪಳ ಎಂಪಿ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ ಸಭೆ: ಚುನಾವಣೆ ಸಿದ್ಧತೆಗೆ ಬಿಜೆಪಿ ಮುಖಂಡರ ಸನ್ನದ್ಧ
ಕುಷ್ಟಗಿ.
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಈ ಭಾರಿ ಹೊಸ ಮುಖಕ್ಕೆ ಮಣೆ ಹಾಕಿರುವ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಕೊಪ್ಪಳ ಲೋಕಸಭೆ ವ್ಯಾಪ್ತಿಯ ಹಾಲಿ, ಮಾಜಿ ಜನಪ್ರತಿನಿಧಿಗಳು, ಬಿಜೆಪಿ ಜಿಲ್ಲಾಧ್ಯಕ್ಷರು, ವಿಭಾಗ ಪ್ರಮುಖರು, ವಿವಿಧ ಮೋರ್ಚಾ ಪದಾಧಿಕಾರಿಗಳು ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಗೆಲ್ಲಿಸಲು ಸನ್ನದ್ಧರಾಗಿ ಕುಷ್ಟಗಿಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರದ ಕೊರ್ ಕಮಿಟಿ ಮತ್ತು ಚುನಾವಣಾ ನಿರ್ವಹಣಾ ಸಬೆ ನಡೆಸಿದರು.
ಬುಧವಾರ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಇಂದಿನಿಂದ ಸಕ್ರೀಯರಾಗಲು ನಿರ್ಧರಿಸಿದರು. ಟಿಕೆಟ್ ವಂಚಿತ ಹಾಲಿ ಸಂಸದ ಸಂಗಣ್ಣ ಕರಡಿ ಅಸಮಾಧಾನದ ಮತ್ತು ಮುಂದಿನ ತಮ್ಮ ನಿಲುವು ಪ್ರಕಟಿಸಲು ಗುರುವಾರ ನಡೆಯಲಿರುವ ಸಭೆಯ ಒಂದು ದಿನ ಮುಂಚಿಯೇ ಕ್ಷೇತ್ರದ ಕೋರ್ ಕಮಿಟಿ ಸಭೆ ನಡೆಸಿರುವುದು ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಕುಷ್ಟಗಿ ಶಾಸಕ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಸಿದ ಮುಖಂಡರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ|| ಬಸವರಾಜ ಕ್ಯಾವಟರ್ ಅವರ ಗೆಲುವಿಗೆ ಕೈಗೊಳ್ಳಬೇಕಾಗಿರುವ ಕಾರ್ಯತಂತ್ರದ ರೂಪ ರೇಷೆಗಳನ್ನು ಚರ್ಚಿಸಿದ್ದಾರೆ.
ಸಭೆಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರದ ಉಸ್ತುವಾರಿ ಮತ್ತು ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ರಾಯಚೂರು ಹಾಲಿ ಶಾಸಕ ಡಾ|| ಶಿವರಾಜಪಾಟೀಲ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಕೊಪ್ಪಳ ಲೋಕಸಭಾ ಅಭ್ಯರ್ಥಿ ಡಾ|| ಬಸವರಾಜ್ ಕ್ಯಾವಟರ್, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಸಚಿವರಾದ ಹಾಲಪ್ಪ ಆಚಾರ, ಸಾಲೋಣಿ ನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗುರು, ಪ್ರತಾಪಗೌಡ ಮಸ್ಕಿ, ಸೋಮಲಿಂಗಪ್ಪ, ಬಿಜೆಪಿ ವಿಭಾಗ ಪ್ರಭಾರಿ ಚಂದ್ರಶೇಖರ ಪಾಟೀಲ ಹಲಗೇರಿ, ಸಿಂಧನೂರಿನ ಮುಖಂಡ ಕೆ.ಕರಿಯಪ್ಪ, ಬಳ್ಳಾರಿಯ ಚನ್ನಬಸನಗೌಡ, ಬಿಜೆಪಿ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ಮುಖಂಡ ನರಸಿಂಗ್‌ರಾವ್ ಕುಲಕರ್ಣಿ ಸೇರಿದಂತೆ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಬಿಜೆಪಿ ಕೆಲ ಮುಖಂಡರು ಸಭೆಯಲ್ಲಿ ಇದ್ದರು.
ಬಾಕ್ಸ್:
ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸನ್ನದ್ಧ
ಲೋಕಸಭೆ ಚುನಾವಣೆಗೆ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೈಕಮಾಂಡ್ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಪಕ್ಷದ ನಿರ್ಧಾರದಂತೆ ಕ್ಷೇತ್ರದ ಎಲ್ಲಾ ಮುಖಂಡರು ಕೆಲಸ ಮಾಡಲು ನಿಶ್ಚಯಿಸಿದ್ದಾರೆ. ಈ ಕುರಿತು ಇಂದು ಕುಷ್ಟಗಿಯಲ್ಲಿ ಕೊಪ್ಪಳ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಎಲ್ಲರು ಸನ್ನದ್ಧರಾಗುತ್ತಿದ್ದಾರೆ. ಹಾಲಿ ಸಂಸದ ಸಂಗಣ್ಣ ಕರಡಿ ಅವರ ಮನವಲಿಸಲು ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಪ್ರಯತ್ನಿಸುತ್ತಾರೆ. ಪಕ್ಷದ ಅಭ್ಯರ್ಥಿ ಡಾ|| ಬಸವರಾಜ ಗೆಲುವಿಗೆ ಪಕ್ಷದ ಎಲ್ಲಾ ಮುಖಂಡರು, ಹಾಲಿ, ಮಾಜಿ ಜನಪ್ರತಿನಿಧಿಗಳು, ಹಿರಿಯರು, ಪದಾಧಿಕಾರಿಗಳು, ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ.
ನವೀನ್ ಗುಳಗಣ್ಣನವರ, ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ.