Blog

ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಸಿಎಂ ಸಿದ್ಧು ಭೇಟಿ. ಅನ್ಸಾರಿಗೆ ಎಲ್ಲಾ ರೀತಿಯ ಸಹಕಾರದ ಭರವಸೆ

>ಗಂಗಾವತಿ.
ಇತ್ತೀಚಿಗೆ ತಮ್ಮನ್ನು ಕಾಂಗ್ರೆಸ್ ಪಕ್ಷದ ಜಿಲ್ಲೆಯ ಮುಂಚೂಣಿ ನಾಯಕರನ್ನು ತಮ್ಮನ್ನು ಕಡೆಗಣಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ಕಾರ್ಯಕರ್ತರಿಗೆ ಮಾಜಿ ಸಚಿವ ಅನ್ಸಾರಿ ಸಂದೇಶ ರವಾನಿಸಿರುವ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಭೇಟಿ ನೀಡಿ ಗೌಪ್ಯವಾಗಿ ಮಾತುಕತೆ ನಡೆಸಿ ಆಶ್ಚರ್ಯ ಮೂಡಿಸಿದ್ದಾರೆ. ಗೌಪ್ಯ ಮಾತುಕತೆಯ ನಂತರ ಹೊರ ಬಂದ ಮುಖ್ಯಮಂತ್ರಿ ಇಕ್ಬಾಲ್ ಅನ್ಸಾರಿ ಅವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವ ಪ್ರಶ್ನೇ ಇಲ್ಲ. ಅವರಿಗೆ ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಸರಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತದೇ ಎಂದು ಅನ್ಸಾರಿ ಬೆಂಬಲಿಗರಿಗೆ ಭರವಸೆ ನೀಡಿ ತೆರಳಿರುವುದು ಅನ್ಸಾರಿ ಮತ್ತು ಅನ್ಸಾರಿ ಬೆಂಬಲಿಗರಿಗೆ ಉತ್ಸಾಹ ಇಮ್ಮಡಿಗೊಳಿಸಿತು.
ಶನಿವಾರ ಕನಕಗಿರಿ ಉತ್ಸವ ಉದ್ಘಾಟನೆ ನಂತರ ಕಮಲಾಪುರದಲ್ಲಿ ವಾಸ್ತವ್ಯ ಹೂಡಲು ಗಂಗಾವತಿ ಮಾರ್ಗವಾಗಿ ಹೊರಟಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನಕಗಿರಿಯಿಂದ ತಮ್ಮ ವಾಹನದಲ್ಲೇ ಇಕ್ಬಾಲ್ ಅನ್ಸಾರಿಯನ್ನು ಕೂಡಿಸಿಕೊಂಡು ರಾತ್ರಿ ನೇರವಾಗಿ ಅನ್ಸಾರಿ ನಿವಾಸಕ್ಕೆ ಆಗಮಿಸಿದರು. ಮುಖ್ಯಮಂತ್ರಿಗಳು ಆಗಮಿಸುತ್ತಿರುವ ವಿಷಯ ತಿಳಿದು ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು, ಅನ್ಸಾರಿ ಬೆಂಬಲಿಗರು ನಿವಾಸದಲ್ಲಿ ಆಗಮಿಸಿ ಭೇಟಿ ಮಾಡಲು ಕಾಯುತ್ತಿದ್ದರು. ಆದರೆ ಮುಖ್ಯಮಂತ್ರಿ ನೇರವಾಗಿ ಅನ್ಸಾರಿಯೊಂದಿಗೆ ಅವರ ಖಾಸಗಿ ಕಚೇರಿಯೊಳಗೆ ಹೋಗಿ ಮಾತುಕತೆ ನಡೆಸಿ ಕೆಲವೇ ಸಮಯದಲ್ಲಿ ಹೊರ ಬಂದು ನೇರವಾಗಿ ಹೊರ ಬಂದರು. ಈ ಸಂದರ್ಭದಲ್ಲಿ ಅನ್ಸಾರಿ ಬೆಂಬಲಿಗರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅನ್ಸಾರಿಗೆ ಎಂಎಲ್‌ಸಿ ಸ್ಥಾನ ನೀಡಬೇಕು. ಅನ್ಸಾರಿ ಅವರನ್ನು ಪಕ್ಷ ಸಂಪೂರ್ಣ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಮುಂದೆಯೇ ಒತ್ತಾಯಿಸಿದರು. ಇದನ್ನು ಅರಿತ ಮುಖ್ಯಮಂತ್ರಿಗಳು ಇಕ್ಬಾಲ್ ಅನ್ಸಾರಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ಎಲ್ಲ ಸಹಕಾರ ನೀಡುತ್ತೇನೆ. ಮುಂದೆ ಅನ್ಸಾರಿಗೆ ಪ್ರಮುಖ ಸ್ಥಾನ ನೀಡಲಾಗುವುದು ಎಂದು ಸಮಾಧಾನಪಡಿಸಿ ತೆರಳಿದರು. ಮುಖ್ಯಮಂತ್ರಿಗಳು ಆಗಮಿಸಿ ತಮ್ಮ ನಾಯಕರಿಗೆ ನೈತಿಕ ಬೆಂಬಲ ನೀಡಿದ್ದಾರೆ ಎಂದು ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರು ಹರ್ಷಗೊಂಡರಲ್ಲದೇ ಗಂಗಾವತಿ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿಯೇ ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದಾರೆ ಎಂದು ಘೋಷಣೆ ಕೂಗಿದರು. ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಎಂಪಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಕೂಡಾ ಮುಖ್ಯಮಂತ್ರಿಯೊಂದಿಗೆ ಅನ್ಸಾರಿ ನಿವಾಸಕ್ಕೆ ಆಗಮಿಸಿ ಗೌಪ್ಯ ಮಾತುಕತೆಯಲ್ಲಿ ಉಪಸ್ಥಿತರಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸಾರಿ ನಮ್ಮ ಪಕ್ಷದ ಕೆಲವು ಕುಹಿಕಿಗಳಿಂದಾಗಿ ನನಗೆ ಸೋಲಾಗಿದೆ. ಆದರೆ ಅಸಲಿ ಕಾಂಗ್ರೆಸ್ ಕಾರ್ಯಕರ್ತರು ನನ್ನೊಂದಿಗೆ ಇದ್ದಾರೆ. ಮುಖ್ಯಮಂತ್ರಿಗಳು ಕೂಡಾ ನನಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಕೆಲವು ಪಕ್ಷ ವಿರೋಧಿಗಳು ಅನವಶ್ಯಕವಾಗಿ ಗಂಗಾವತಿ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತ್ಯೇಕ ಕಚೇರಿ ಪ್ರಾರಂಭಿಸುತ್ತಿರುವುದರ ಬಗ್ಗೆಯೂ ನಾನು ತಲೆ ಕಡೆಸಿಕೊಂಡಿಲ್ಲ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬರುವವರೆಲ್ಲರೂ ಕೆಆರ್‌ಪಿಪಿ ಬೆಂಬಲಿಗರು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಹತ್ತಿರ ಇರುವವರೇ ಅಸಲಿ ಕಾಂಗ್ರೆಸ್ ಕಾರ್ಯಕರ್ತರು ಎಂದು ನೂತನವಾಗಿ ಕಾಂಗ್ರೆಸ್ ಕಚೇರಿ ಮಾಡುವವರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದರು. ಈ ಸಂದರ್ಭದಲ್ಲಿ ಅನ್ಸಾರಿ ಪುತ್ರ ಇಮ್ತಿಯಾಜ್ ಅನ್ಸಾರಿ, ಕಾಂಗ್ರೆಸ್ ಮುಖಂಡರಾದ ಮನೋಹರಸ್ವಾಮಿ, ಯಮನಪ್ಪ ವಿಠಲಾಪುರ, ನೀಲಪ್ಪ ಸಣ್ಣಕ್ಕಿ, ಕಾಸಿಂಸಾಬ್ ಗದ್ವಾಲ್, ವಿಶ್ವನಾಥ ಪಾಟೀಲ್, ರಾಮಣ್ಣ ಬಳ್ಳಾರಿ, ಹುಸೇನಪ್ಪ ಹಂಚಿನಾಳ, ಜುಬೇರ, ಸನ್ನಿಕ್ ಪಾಷಾ, ಶಿವಕುಮಾರ ಚಲುವಾದಿ, ಪರಮೇಶ ಸೇರಿದಂತೆ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ಬಾಕ್ಸ್:
ಹಿಟ್ನಾಳ್ ಸಹೋದರರು ಸಾತ್.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನಕಗಿರಿ ಉತ್ಸವದ ನಂತರ ನೇರವಾಗಿ ಗಂಗಾವತಿಗೆ ಆಗಮಿಸಿ ಮಾಜಿ ಸಚಿವ ಇಕ್ಬಾಲ್ ನಿವಾಸಕ್ಕೆ ಆಗಮಿಸಿ ಗೌಪ್ಯವಾಗಿ ಅನ್ಸಾರಿಯೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಕಾಂಗ್ರೆಸ್ ಪಕ್ಷದ ಎಂಪಿ ಆಕಾಂಕ್ಷಿ ರಾಜಶೇಖರ ಹಿಟ್ನಾಳ ಜೊತೆಯಲ್ಲಿರುವುದು ವಿಶೇಷವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button