ಅಧಿಕಾರಿಗಳೇ ಇತ್ತ ಗಮನ ಹರಿಸಿ ! ಕನಕಗಿರಿಯ ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಚರಂಡಿ ಸಮಸ್ಯೆ – ಜನರ ಆಕ್ರೋಶ

ಕನಕಗಿರಿ : ಸುಳೇಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸುಳೇಕಲ್ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ತುಂಬಿ, ಹಾವು, ಚೋಳು ಮುಂತಾದ ವಿಷಜಂತುಗಳು ಮನೆಗಳಿಗೆ ನುಗ್ಗುವ ಪರಿಸ್ಥಿತಿ ಉಂಟಾಗಿದೆ.ಈ ಹಿಂದೆ ಗ್ರಾಮಸ್ಥರು ಚರಂಡಿ ಕಲ್ಲು-ಮಣ್ಣು ಬಿದ್ದು 90% ಮುಚ್ಚಿಹೋಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ “ಶೀಘ್ರದಲ್ಲೇ ಸಮಸ್ಯೆ ಪರಿಹರಿಸುತ್ತೇವೆ” ಎಂದು ಭರವಸೆ ನೀಡಿದ್ದರೂ, ಇದುವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ.
ಮಳೆ ನೀರು ಪಕ್ಕದ ಮನೆಗಳಿಗೆ ನುಗ್ಗಿ, ನೀರಿನ ಜೊತೆ ವಿಷಜಂತುಗಳು ಮನೆಗಳಲ್ಲಿ ಪ್ರವೇಶಿಸುತ್ತಿದ್ದು ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.ಗ್ರಾಮಸ್ಥರು ಆರೋಪಿಸುತ್ತಾ, “ಎಸ್‌ಸಿ ಮತ್ತು ಎಸ್‌ಟಿ ಕಾಲೋನಿಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 25% ಅನುದಾನ ನೀಡಲಾಗುತ್ತಿದ್ದರೂ ಅದನ್ನು ಸರಿಯಾಗಿ ಬಳಸದೆ ದುರುಪಯೋಗ ಮಾಡಲಾಗುತ್ತಿದೆ. ಸರಳ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.