ವಡ್ಡರಹಟ್ಟಿಗೆ ಪಿಎಚ್ ಸಿ ಕೇಂದ್ರ ಮಂಜೂರು ಮಾಡಿ
ಶಾಸಕ ಜನಾರ್ಧನ ರೆಡ್ಡಿಗೆ ವಡ್ಡರಹಟ್ಟಿ ನಾಗರಿಕ ಸಮಿತಿ ಮನವಿ

ಗಂಗಾವತಿ : ತಾಲೂಕಿನ ದೊಡ್ಡಗ್ರಾಮವಾದ ವಡ್ಡರಹಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ವಡ್ಡರಹಟ್ಟಿ ನಾಗರಿಕ ಸಮಿತಿ ಅವರು ಸೋಮವಾರ ಮನವಿ ಸಲ್ಲಿಸಿದರು.
ಸಂಚಾಲಕರಾದ ಶಿವರಾಜ ಡಂಬರ್ ಅವರು ಮಾತನಾಡಿ, ವಡ್ಡರಹಟ್ಟಿಯಲ್ಲಿ 12 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಬಡವರು, ರೈತಾಪಿ ವರ್ಗ, ಕೂಲಿಕಾರರ ಕುಟುಂಬಗಳು ಹೆಚ್ಚಿವೆ. ಸೂಕ್ತ ಚಿಕಿತ್ಸಾ ಕೇಂದ್ರಗಳು ಇಲ್ಲ. ಗ್ರಾಮವನ್ನು ಎರಡು ಭಾಗವಾಗಿ ವಿಂಗಡಿಸಿ, ಗ್ರಾಮದ ವ್ಯಾಪ್ತಿಯ ಗುಡ್ಡದಕ್ಯಾಂಪ್ ಮತ್ತು ಗದ್ವಾಲ್ ಕ್ಯಾಂಪ್ ಅನ್ನು 7 ಕಿ.ಮೀ. ದೂರದ ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ ( ಪಿಎಚ್ ಸಿ)ಗೆ ಹಾಗೂ ವಡ್ಡರಹಟ್ಟಿಯ ಉಳಿದ ವಾರ್ಡ್ ಗಳನ್ನು 15 ಕಿ.ಮೀ. ದೂರ ಇರುವ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ ಸಿ)ಗೆ ಸೇರ್ಪಡೆ ಮಾಡಿರುತ್ತಾರೆ.
ಗ್ರಾಮದ ಬಾಣಂತಿಯರು ಮತ್ತು ಗರ್ಭಿಣಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಏನೆ ಸೌಲಭ್ಯ ಪಡೆಯಲು ಹಾಗೂ ತರಬೇತಿ ಕಾರ್ಯಾಗಾರಗಳಿಗೆ ಆನೆಗೊಂದಿ ಮತ್ತು ವೆಂಕಟಗಿರಿಗೆ ತೆರಳಬೇಕಿದೆ. ವಡ್ಡರಹಟ್ಟಿ ಗ್ರಾಮದಲ್ಲಿ ಸದ್ಯ ಚಿಕ್ಕದಾಗಿ ಉಪಕೇಂದ್ರ ತೆರೆದಿರುತ್ತಾರೆ. ಈ ಕೇಂದ್ರದಲ್ಲಿ ಯಾವುದೇ ಚಿಕಿತ್ಸೆ ನೀಡಲು ಅನುಮತಿ ಇರುವುದಿಲ್ಲ. ಹೀಗಾಗಿ ಆರೋಗ್ಯ ಕ್ಷೇತ್ರದಲ್ಲಿ ವಡ್ಡರಹಟ್ಟಿಯನ್ನು ಇಬ್ಭಾಗ ಮಾಡಿರುವುದು ಹಾಗೂ ಕಡೆಗಣಿಸಿರುವುದು ತುಂಬಾ ಖಂಡನೀಯ. ಕೂಡಲೇ ವಡ್ಡರಹಟ್ಟಿಯನ್ನು ಒಂದೇ ಮಾಡಿ ಗ್ರಾಮದಲ್ಲಿಯೇ ಪಿಎಚ್ ಸಿ ತೆರೆಯಬೇಕು. ಇದರಿಂದ ವಡ್ಡರಹಟ್ಟಿ ಮತ್ತು ಆರ್ಹಾಳ ಗ್ರಾಮದ ಜನರಿಗೂ ಅನುಕೂಲ ಆಗಲಿದೆ. ಪ್ರಸಕ್ತ ವರ್ಷದಲ್ಲೇ ಪಿಎಚ್ ಸಿ ಕೇಂದ್ರ ಮಂಜೂರು ಮಾಡುವಂತೆ ಮನವಿ ಮಾಡಿದರು.
ನಂತರ ತಾಲೂಕು ಆರೋಗ್ಯ ಅಧಿಕಾರಿಗಳಾದ ಗೌರಿಶಂಕರ್ ಅವರಿಗೆ ನಾಗರಿಕ ಸಮಿತಿ ಅವರು ಮನವಿ ಸಲ್ಲಿಸಿ’ ವಡ್ಡರಹಟ್ಟಿಗೆ ಪಿಎಚ್ ಸಿ ಕೇಂದ್ರ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದರು.
ಮುಖಂಡರಾದ ಚಿನ್ನಪ್ಪ ನಾಯಕ, ಸೋಮಯ್ಯ, ನಾಗರಿಕ ಸಮಿತಿಯ ಪ್ರಮುಖರಾದ ಭೀರಪ್ಪ ಗಡ್ಡಿ, ಬಸವರಾಜ ವದ್ದಟ್ಟಿ, ಹನುಮಂತಪ್ಪ ಡಂಬರ್, ಖಾದರ್ ಸಾಬ್ ಹಿರೇಮನಿ, ಹುಮೇಶ ಬಳ್ಳಾರಿ, ಆದೇಶ ದೋಟಿಹಾಳ, ಯಮನೂರಪ್ಪ ದೋಟಿಹಾಳ, ಬಸವರಾಜ ನಾಯಕ ದೋಟಿಹಾಳ, ರಾಜಾಸಾಬ್ ಮೇಸ್ತ್ರಿ, ರಸೂಲ್ ಸೇರಿ ಇತರರಿದ್ದರು.