ಅಕ್ರಮ ಗಾಂಜಾ ಮತ್ತು ಡ್ರಗ್ಸ್ ಮಾರಾಟ ಮುಕ್ತ ಮಾಡಲು; ಇಲಾಖೆಗಳಿಗೆ ಎಚ್ಚರಿಕೆ ನೀಡಿದ ಜನಾರ್ಧನರೆಡ್ಡಿ

ಇಂದು ಗಂಗಾವತಿ ತಾಲೂಕು ಪಂಚಾಯತ್‌ನ ಮಂಥನ ಸಭಾಂಗಣದಲ್ಲಿ ದ್ವಿತೀಯ ತ್ರೈಮಾಸಿಕ ಕೆ.ಡಿ.ಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ) ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತ್ರೈಮಾಸಿಕ ಪ್ರಗತಿ ವರದಿಗಳನ್ನು ಸಲ್ಲಿಸಿದರು.
ಗಂಗಾವತಿ ನಗರದಲ್ಲಿನ ರಸ್ತೆಗಳನ್ನು ಸುಮಾರು 12.5 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸುವಂತೆ ಸಂಬಂಧಿತ ಇಲಾಖೆಗೆ ಸೂಚಿಸಲಾಯಿತು.
ಗಾಂಜಾ ಮಾರಾಟ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಗಂಗಾವತಿಯನ್ನು ಡ್ರಗ್ಸ್ ಮುಕ್ತ ಮಾಡಲು ಪೋಲಿಸ್ ಹಾಗೂ ಅಬಕಾರಿ ಅಧಿಕಾರಿಗಳಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.
ಕ್ಷೇತ್ರಾದ್ಯಂತ ಕೆಲವು ಶಾಲೆಗಳ ಕೊಠಡಿ ದುರಸ್ತಿ ಮತ್ತು ಶೌಚಾಲಯ ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿಯಿಂದ 25% ಅನುದಾನ ಮೀಸಲಿಡಲಾಗಿದ್ದು, ಈ ಅನುದಾನವನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಯಿತು. ಭಗತ್ ಸಿಂಗ್ ನಗರದ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ಸಂಬಂಧಿತ ಸಮಸ್ಯೆಯನ್ನು ಬಗೆಹರಿಸಲು ನಗರಾಭಿವೃದ್ಧಿ ಮತ್ತು ನಗರಸಭೆ ಇಲಾಖೆಗೆ ಸೂಚನೆ ನೀಡಲಾಯಿತು.
ಕರಡಿ ಮತ್ತು ಚಿರತೆ ಕಾಟವನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ, ದಾನಿಗಳ ಮೂಲಕ ಕರಡಿ ಧಾಮ ನಿರ್ಮಾಣದ ಕುರಿತು ಚರ್ಚಿಸಲು, ಹಾಗೂ ವನ್ಯಜೀವಿ ವಲಯ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆದೇಶಿಸಲಾಯಿತು. ಗಂಗಾವತಿಯಿಂದ ಅಂಜನಾದ್ರಿವರೆಗಿನ ರಸ್ತೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಗಿಡಗಳನ್ನು ನೆಡುವಂತೆ ಸೂಚಿಸಲಾಯಿತು.
ವಡ್ಡರಹಟ್ಟಿಯಲ್ಲಿ ಕೃಷಿ ಇಲಾಖೆಗೆ ಸೇರಿದ 108 ಎಕರೆ ಪ್ರದೇಶದಲ್ಲಿ ಕೆಲವರು ಭೂ ಅತಿಕ್ರಮಣ ಮಾಡಿದ್ದು ಅದನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮುಂದಿನ ವರ್ಷ ಜುಲೈ ವೇಳೆಗೆ ಪೂರ್ಣಗೊಳಿಸಲು ಸೂಚಿಸಿದರು.
ಸಭೆಯಲ್ಲಿ ಕೃಷಿ, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ನೀರಾವರಿ, ಜೆಸ್ಕಾಂ ಸೇರಿದಂತೆ ಹಲವು ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ವಿವರವಾದ ಚರ್ಚೆ ನಡೆಯಿತು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸುವಂತೆ ಮತ್ತು ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಈ ಸಭೆಯು ಗಂಗಾವತಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವ ಗುರಿಯನ್ನು ಹೊಂದಿದ್ದು, ಜನರ ಜೀವನಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಒದಗಿಸಲಾಯಿತು.
ಈ ಸಭೆಯಲ್ಲಿ ನಗರಸಭಾ ಅಧ್ಯಕ್ಷರಾದ ಹೀರಾಬಾಯಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಚೌಡ್ಕಿ, ಗಂಗಾವತಿ ತಹಸೀಲ್ದಾರಾದ ಯು ನಾಗರಾಜ್, ಗಂಗಾವತಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್, ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಹಾಗೂ ನಗರಸಭೆ ಪೌರಾಯುಕ್ತರಾದ ಆರ್. ವಿರುಪಾಕ್ಷಮೂರ್ತಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಹಾಗೂ ತಾ.ಪಂ ಸಹಾಯಕ ನಿರ್ದೇಶಕರು, ಯೋಜನಾಧಿಕಾರಿಗಳು, ವ್ಯವಸ್ಥಾಪಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿಗಳು ಹಾಗೂ ಮಾಧ್ಯಮ ಸ್ನೇಹಿತರು ಉಪಸ್ಥಿತರಿದ್ದರು.