ನರೇಗಾ ನೌಕರರಿಗೆ ಸೇವಾ ಭದ್ರತೆ ಒದಗಿಸಿ
ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಒತ್ತಾಯ ಶಾಸಕ ಜನಾರ್ಧನ ರೆಡ್ಡಿಗೆ ಮನವಿ

*ಗಂಗಾವತಿ* : ನರೇಗಾ ಎಲ್ಲ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಹಾಗೂ ಬಾಕಿ 6 ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘ ಮತ್ತು ಗ್ರಾಮಾಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದಿಂದ ಜಂಟಿಯಾಗಿ ಸೋಮವಾರ ಮನವಿ ಸಲ್ಲಿಸಲಾಯಿತು.
ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಘಟಕದ ಅಧ್ಯಕ್ಷರಾದ ಕೊಟ್ರೇಶ ಜವಳಿ ಅವರು ಮಾತನಾಡಿ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ , ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ 5000ಕ್ಕೂ ಹೆಚ್ಚು ನೌಕರರಿಗೆ ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಎಲ್ಲಾ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳು, ಪ್ರಯಾಣ ವೆಚ್ಚಗಳು, ಸಾಲಗಳ ಮರುವಾವತಿ, ಇ.ಎಂ.ಐ. ಸೇರಿ ಅನೇಕ ರೀತಿಯ ಖರ್ಚುವೆಚ್ಚಗಳನ್ನು ನಿಭಾಯಿಸಲು ತೀವ್ರ ತೊಂದರೆಯುಂಟಾಗುತ್ತಿದೆ ಎಂದರು.
ಈಗಾಗಲೇ ಬೇಡಿಕೆಗಳ ಈಡೇರಿಕೆಗಾಗಿ ಜು.7 ರಿಂದ ರಾಜ್ಯದ್ಯಂತ ನೌಕರರು ಅಸಹಕಾರ ಚಳುವಳಿ ಮಾಡುತ್ತಿದ್ದು, ಕೂಡಲೇ ಬಾಕಿ ವೇತನ ಪಾವತಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆಯಾದರೂ ರಾಜ್ಯ ಸರಕಾರ ನೌಕರರ ವೇತನ ಪಾವತಿಸುವಲ್ಲಿ ತಾಂತ್ರಿಕ ಕಾರಣ ಹೇಳಿ ವಿಳಂಬ ಮಾಡುತ್ತಿದೆ. ಇದರಿಂದ ನೌಕರರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಹಾಗೂ ಬಾಕಿ 6 ತಿಂಗಳ ವೇತನ ಪಾವತಿ ಆಗುವವರೆಗೂ ಅಸಹಕಾರ ಚಳುವಳಿ ಮಾಡುತ್ತೇವೆ ಎಂದು ನೌಕರರು ಘೋಷಣೆ ಕೂಗಿದರು. ಇದಕ್ಕೆ ಶಾಸಕ ಜನಾರ್ಧನ ರೆಡ್ಡಿ ಅವರು ಪ್ರತಿಕ್ರಿಯಿಸಿ, ‘ನರೇಗಾ ನೌಕರರ ಎಲ್ಲ ಸಮಸ್ಯೆಗಳನ್ನು ವಿಧಾನಸೌಧದ ಕಲಾಪದಲ್ಲಿ ಧ್ವನಿ ಎತ್ತಲಾಗುವುದು’ ಎಂದರು.
ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶರಣಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಬಾಳಪ್ಪ ತಾಳಕೇರಿ, ಸದಸ್ಯರಾದ ಶರಣಬಸವ ಮಾಲಿಪಾಟೀಲ್, ಬಸವರಾಜ ಜಟಗಿ, ಉದಯ ಕುಮಾರ್, ಸಂಗಮೇಶ, ಶ್ರೀಕಾಂತ ಅರ್ಲೂರು, ವಿಜಯ ಶಿರಿಗೇರಿ, ಹನುಮೇಶ, ಶ್ವೇತಾ, ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ನಿಂಗಪ್ಪ, ಯಂಕೋಬ, ಮಾರುತಿ, ಹನುಮೇಶ, ಸುರೇಶ, ವಿರುಪಣ್ಣ, ಗ್ರಾಮ ಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದ ಮಲ್ಲಮ್ಮ, ಸುಜಾತ, ಲಲಿತಾ, ಹುಲಿಗೆಮ್ಮ, ಯಶೋಧ, ಶಾರದಾ, ನಾಗಮ್ಮ ಸೇರಿ ಇತರರಿದ್ದರು.