ಮಂಜೂರಾದ ಆಸ್ಪತ್ರೆ ರದ್ದು: ‘ಇದು ಸಚಿವ ತಂಗಡಗಿ ಅಭಿವೃದ್ಧಿ ಮಾದರಿ’ – ಕೆರಳಿದ ಜನಾರ್ದನ್ ರೆಡ್ಡಿ

ಗಂಗಾವತಿ (ಕೊಪ್ಪಳ): ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವೆಂಕಟಗಿರಿ ಹಾಗೂ ಇರಕಲ್ ಗಡಾ ಹೋಬಳಿಗೆ ಮಂಜೂರಾಗಿದ್ದ ತಲಾ 30 ಹಾಸಿಗೆಗಳ ಎರಡು ಸಮುದಾಯ ಆಸ್ಪತ್ರೆಗಳನ್ನು ಸಚಿವ ಶಿವರಾಜ ತಂಗಡಗಿ ರದ್ದು ಮಾಡಿಸಿದ್ದಾರೆ. ಇದು ಸಚಿವ `ತಂಗಡಗಿ ಅಭಿವೃದ್ಧಿ ಮಾದರಿ’ ಎಂದು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ವಾಗ್ದಾಳಿ ನಡೆಸಿದರು.
ನನ್ನ ಕ್ಷೇತ್ರದಲ್ಲಿ ಬರುವ ವೆಂಕಟಗಿರಿ ಹಾಗೂ ಇರಕಲ್ ಗಡಾ ಹೋಬಳಿಗೆ ಮಂಜೂರಾಗಿದ್ದ ತಲಾ 30 ಹಾಸಿಗೆಗಳ ಎರಡು ಸಮುದಾಯ ಆಸ್ಪತ್ರೆಗಳನ್ನು ಸಚಿವ ಶಿವರಾಜ ತಂಗಡಗಿ ರದ್ದು ಮಾಡಿಸಿದ್ದಾರೆ ಎಂದು ಶಾಸಕ ಜನಾರ್ದನ್ ರೆಡ್ಡಿ ಆರೋಪಿಸಿದರು.
ನಗರದ ತಾಲೂಕು ಪಂಚಾಯತ್ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ತಂಗಡಗಿ ಅಸಹಕಾರದ ತೋರುತ್ತಿದ್ದಾರೆ ಎಂದು ಬಗ್ಗೆ ಕಿಡಿಕಾರಿದರು.

ನಾನು 36 ದಿನ ಕಾರಾಗೃಹದಲ್ಲಿದ್ದಾಗ ಗಂಗಾವತಿ ಕ್ಷೇತ್ರದ ಅಭಿವೃದ್ಧಿ ನನ್ನ ಜವಾಬ್ದಾರಿ. ನಾನು ಜಿಲ್ಲಾ ಉಸ್ತುವಾರಿ ಸಚಿವ, ಕಾರಣಾಂತರದಿಂದ ಶಾಸಕ ರೆಡ್ಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದರೇನು..? ನಾನಿದ್ದೇನೆ. ಗಂಗಾವತಿ ಅಭಿವೃದ್ಧಿ ನನ್ನ ಜವಾಬ್ದಾರಿ ಎಂದು ತಂಗಡಗಿ ಹೇಳಿದ್ದರು. ಆದರೆ ಹಿಂದುಳಿದ ವೆಂಕಟಗಿರಿ ಹೋಬಳಿಗೆ ಮಂಜೂರಾಗಿದ್ದ 30 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯನ್ನು ಯಾವುದೇ ಸಕಾರಣ ನೀಡದೇ ರದ್ದು ಮಾಡಲಾಗಿದೆ. ಇರಕಲ್ ಗಡಾಕ್ಕೆ ಮಂಜೂರಾಗಿದ್ದ ಆಸ್ಪತ್ರೆಗೂ ಕೊಕ್ಕೆ ಹಾಕಲಾಗಿದೆ. ಇದೇನಾ ಸಚಿವ ತಂಗಡಗಿ ಅವರ ಮಾದರಿ ಅಭಿವೃದ್ಧಿ ಎಂದು ಅವರು ಪ್ರಶ್ನಿಸಿದರು.
ಇವರ ಹಣೆಬರಹ ಏನು ಎಂಬುದು ಮಾಧ್ಯಮಗಳ ಮೂಲಕ ಜನರಿಗೂ ಗೊತ್ತಾಗಬೇಕು. ಇನ್ನೆರಡು ವರ್ಷ ಆದಮೇಲೆ ಇವರು ಎಲ್ಲಿರುತ್ತಾರೋ ಜನ ಕಾದು ನೋಡಬೇಕು. ಶಾಸಕರಿಲ್ಲ ಎಂದು ಯಾರೂ ಚಿಂತೆ ಮಾಡಬೇಕಿಲ್ಲ ಎಂದು ಹೇಳಿದರವರು ಮಾಡಬೇಕಿದ್ದ ಕೆಲಸವಾ ಇದು? ಗಂಗಾವತಿ ಮತ ಕ್ಷೇತ್ರದ ಅಭಿವೃದ್ಧಿಗೆ ತಂಗಡಗಿ ಏನೇ ತಡೆಯೊಡಿದ್ದರೂ, ಕೊಕ್ಕೆ ಹಾಕಲು ಯತ್ನಿಸಿದರೂ ಯಾವ ಇಲಾಖೆಯಿಂದ, ಯಾವ ಅಧಿಕಾರಿಯಿಂದ ಏನು ಯೋಜನೆಗಳನ್ನು ತರಬೇಕು ಎಂಬುದು ನನಗೆ ಗೊತ್ತಿದೆ. ಇದನ್ನು ಎಲ್ಲಿ ಪ್ರಶ್ನಿಸಬೇಕೋ ಅಲ್ಲಿ ಪ್ರಶ್ನಿಸುತ್ತೇನೆ ಎಂದು ರೆಡ್ಡಿ ಗುಡುಗಿದರು.