ಜಾತಿ ಗಣತಿಗೆ ಪಡಿತರ ಚೀಟಿ ಕಡ್ಡಾಯ ನಿಯಮ ಕೈ ಬಿಡಬೇಕು ! ಇದರಿಂದ ಜಾತಿಗಣತಿ ಮೂಲ ಧ್ಯೇಯ ಈಡೇರುವುದಿಲ್ಲ….. ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಒತ್ತಾಯ

ಪಡಿತರ ಚೀಟಿ ಕಡ್ಡಾಯದ ಮೇಲೆ ಜಾತಿಗಣತಿ ಸಲ್ಲದು, ಇದರಿಂದ ಜಾತಿಗಣತಿ ಉದ್ದೇಶ ಈಡೇರುವುದಿಲ್ಲ…… ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ
ಕಾರಟಗಿ ; ಪರಿಶಿಷ್ಟ ಜಾತಿಗಳ ಸಮೀಕ್ಷೆ ಅಂಗವಾಗಿ ನಡೆಸುತ್ತಿರುವ ಗಣತಿ ತಂತ್ರಾಂಶದಲ್ಲಿನ ಕೆಲವು ಲೋಪದೋಷಗಳನ್ನು ಸರಿಪಡಿಸಲು ಸರ್ಕಾರಕ್ಕೆ ಸಲಹೆ ನೀಡುವಂತೆ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಇವರು ಕರ್ನಾಟಕ ರಾಜ್ಯ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಒತ್ತಾಯ ಮಾಡಿದ್ದಾರೆ, ಪರಿಶಿಷ್ಠ ಜಾತಿ ಒಳಮೀಸಲಾತಿ ವರ್ಗೀಕರಣದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಯ ಕುಟುಂಬಗಳ ಮನೆಬಾಗಿಲಿಗೆ ಸರಕಾರದಿಂದ ನೇಮಿಸಿರುವ ಗಣತಿದಾರರು ಬಂದು ಗಣತಿ ಮಾಡುತ್ತಿದ್ದಾರೆ.
ಆದರೆ ಗಣತಿ ಕಾರ್ಯವನ್ನು ಸರ್ಕಾರವು ಮೊಬೈಲ್ ಆ್ಯಪ್ ಮೂಲಕ ಮಾಡುತ್ತಿದ್ದು, ಸದರಿ ಆ್ಯಪ್‌ನಲ್ಲಿ ಕೆಲವು ತಾಂತ್ರಿಕವಾಗಿ ತೊಂದರೆಗಳಾಗುತ್ತಿವೆ.
ಸದರಿ ಆ್ಯಪ್ ಮೂಲಕ ಗಣತಿ ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಕುಟುಂಬವನ್ನು ಆಯ್ಕೆಮಾಡಿಕೊಂಡಲ್ಲಿ ಸಮಗ್ರ ಮಾಹಿತಿಯನ್ನು ಒದಗಿಸಬೇಕಾಗಿರುತ್ತದೆ. ಒಂದು ಕುಟುಂಬದ ರೇಷನ್ ಕಾರ್ಡ್ನ ಸದಸ್ಯರನ್ನು ಹಾಗೂ ರೇಷನ್ ಕಾರ್ಡ್ನಲ್ಲಿ ಹೆಸರು ನಮೂದಿಸಿದ ಕುಟುಂಬದ ಇಬ್ಬರು ಸದಸ್ಯರನ್ನು ಮಾತ್ರ ಗಣತಿಗೆ ಪರಿಗಣಿಸುತ್ತಿದ್ದು, ಪಡಿತರ ಚೀಟಿಯಲ್ಲಿ ಹೆಸರನ್ನು ನಮೂದಿಸದ ಹೆಚ್ಚಿನ ಮಕ್ಕಳ ವಿವರಗಳನ್ನು ಗಣತಿಗೆ ಪರಿಗಣಿಸಲಾಗುತ್ತಿಲ್ಲ. ಅಲ್ಲದೆ ಇತ್ತೀಚೆಗೆ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಿ ಇನ್ನೂ ಪಡಿತರ ಚೀಟಿ ಬರದೇ ಇರುವವರು ಕುಟುಂಬಗಳು ಗಣತಿಯಿಂದ ಹೊರಗುಳಿಯುತ್ತಿವೆ.
ಗಣತಿಗೆ ಬಳಸುತ್ತಿರುವ ಮೊಬೈಲ್ ಆ್ಯಪ್ ಗಣತಿದಾರರು ಡೌನ್‌ಲೋಡ್ ಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ನಂತರ ಆ್ಯಪ್‌ನಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳ ಮಾಹಿತಿಗಳನ್ನು ದಾಖಲಿಸುವಲ್ಲಿ ಅತಿ ಕಡಿಮೆ ವೇಗದ ಇಂಟರ್‌ನೆಟ್‌ನಿಂದ ತೀವ್ರ ವಿಳಂಬವಾಗುತ್ತಿದೆ.
ಇದರಿಂದ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಸಾಕಷ್ಟು ಕುಟುಂಬಗಳು ಗಣತಿಯಿಂದ ಹೊರಗುಳಿಯಲಿದ್ದು, ಗಣತಿ ಕಾರ್ಯ ಉದ್ದೇಶವೇ ವಿಫಲಗೊಳ್ಳುವ ಸಾಧ್ಯತೆ ಇರುತ್ತದೆ.
ಕಾರಣ ಗಣತಿಗೆ ಬಳಸುತ್ತಿರುವ ಮೊಬೈಲ್ ಆ್ಯಪ್‌ನ ತಾಂತ್ರಿಕ ದೋಷವನ್ನು ಸರಿಪಡಿಸುವುದು ಹಾಗೂ ಪಡಿತರ ಚೀಟಿ ಆಧಾರದ ಮೇಲೆಯೇ ಗಣತಿ ಕಾರ್ಯ ಮಾಡುತ್ತಿರುವ ಕಾರ್ಯವನ್ನು ಹಿಂಪಡೆದು, ಆಧಾರ ಕಾರ್ಡ್ / ಮತದಾರರು ಗುರುತಿನ ಚೀಟಿ ಜಾತಿ ಪ್ರಮಾಣ ಪತ್ರ ಇತ್ಯಾದಿಗಳ ಪೂರಕ ದಾಖಲೆಗಳ ಮೂಲಕ ಗಣತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ