ಮೈಲಾಪುರ ಗುಡ್ಡದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ, ಅಧಿಕಾರಿಗಳ ದಾಳಿ, ಎದೆಗಾರಿಕೆ ತೋರಿದ ಮಹಿಳಾ ಅಧಿಕಾರಿ ಸಂಗಮ್ಮ
ವರದಿ ಸುಂದರರಾಜ್ BA ಕಾರಟಗಿ

ಮೈಲಾಪುರ ಗುಡ್ಡದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ, ಅಧಿಕಾರಿಗಳ ದಾಳಿ, ಎದೆಗಾರಿಕೆ ತೋರಿದ ಮಹಿಳಾ ಅಧಿಕಾರಿ ಸಂಗಮ್ಮ
ಕಾರಟಗಿ ಜನವರಿ 06,2026: ತಾಲೂಕಿನ ಮೈಲಾಪುರ ಗ್ರಾಮದ ಸರ್ವೇ ನಂಬರ್ 74 ರಲ್ಲಿ 21 ಎಕರೆ ಸರ್ಕಾರಿ ಗಾಯರಾಣ ಗುಡ್ಡ ಗಾಡು ಪ್ರದೇಶವಿದ್ದು, ಇಲ್ಲಿ ನಿರಂತರವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಆಗಾಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿದ್ದವು. ಮಣ್ಣು ಕಳ್ಳರು ಬೆಲೆ ಬಾಳುವ ಫಲವತ್ತತೆಯ ಮಣ್ಣು ನಿಯಮ ಬಾಹಿರವಾಗಿ ಅಧಿಕಾರಿಗಳ ಕಣ್ ತಪ್ಪಿಸಿ ಅಕ್ರಮ ಸಾಗಾಟ ಮಾಡಿ ರಾಜಧನಕ್ಕೆ ನಷ್ಟ ಮಾಡುತ್ತಿದ್ದರು. ಗಾಯರಾಣ ಪ್ರದೇಶದಲ್ಲಿ ಯಾವುದೇ ಮಣ್ಣು ಗಣಿಗಾರಿಕೆ ಅವಕಾಶವಿಲ್ಲ.ಮೈಲಾಪುರ ಗ್ರಾಮದ ಸರ್ವೇ ನಂತರ 74 ರಲ್ಲಿ ಹಿಟಾಚಿಗಳಿಂದ ಗುಡ್ಡ ಅಗೆಯುತ್ತಿರುವ ಬಗ್ಗೆ ಸ್ಥಳೀಯರು ನೀಡಿರುವ ಮಾಹಿತಿ ಹಿನ್ನಲೆಯಲ್ಲಿ ತಹಸೀಲ್ದಾರ್ ಕುಮಾರಸ್ವಾಮಿ ಎಂ ಇವರು ಕ್ರಮಕ್ಕೆ ಮುಂದಾಗಿದ್ದಾರೆ. ಕೂಡಲೇ ಕಂದಾಯ ನಿರೀಕ್ಷರಾದ ಶ್ರೀಮತಿ ಸಂಗಮ್ಮ ಗ್ರಾಮ ಲೆಕ್ಕಾಧಿಕಾರಿಯಾದ ದೊಡ್ಡನಗೌಡ ಗ್ರಾಮ ಪಂಚಾಯಿತಿ ಅಧಿಕಾರಿಯಾದ ರಾಮು ನಾಯಕ್ ಇವರನ್ನು ಅಕ್ರಮವಾಗಿ ಗುಡ್ಡ ಅಗೆಯುವ ಸ್ಥಳಕ್ಕೆ ಕಳುಹಿಸಿದ್ದಾರೆ.
ಅಧಿಕಾರಿಗಳು ಸರ್ವೇ ನಂಬರ್ 74 ರಲ್ಲಿ ಹಿಟಾಚಿಗಳಿಂದ ಗುಡ್ಡ ಅಗೆಯುತ್ತಿರುವ ಸ್ಥಳಕ್ಕೆ ಬಂದು ದಾಳಿ ನಡೆಸಿದ್ದಾರೆ. ಮಣ್ಣು ಕಳ್ಳರು ಅಧಿಕಾರಿಗಳ ಕಂಡು ಓಡಿಹೋಗಿದ್ದಾರೆ. ಗುಂಪು ಸೇರಿದ ಗ್ರಾಮಸ್ಥರು ಪ್ರಕರಣ ದಾಖಲಿಸಿ ಹಿಟಾಚಿ ಹತೋಟಿಗೆ ಪಡೆಯುವಂತೆ ಹಾಗೂ ಗಾಯರಾಣ ಪ್ರದೇಶ ರಕ್ಷಣೆ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾತಿನ ಚಕಮಕಿ ನಡೆಯಿತು. ಕಂದಾಯ ನಿರೀಕ್ಷಕರು ಸಂಗಮ್ಮ ಇವರು ಗ್ರಾಮಸ್ಥರಿಗೆ ಖಡಕ್ಕಾಗಿಯೇ ಉತ್ತರಿಸಿದರು. ವಸ್ತು ಸ್ಥಿತಿ ವರದಿ ತಯಾರಿಸಿ ತಹಸೀಲ್ದಾರರಿಗೆ ನೀಡುತ್ತೇವೆ ಎಂದರು.
ಒಂದು ದಶಕದಿಂದಲೂ ನಿರಂತರ ಗುಡ್ಡ ಅಗೆಯುವುದು ನಡೆಯುತ್ತಿದೆ ಆದರೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ ಆದರೆ ಗ್ರಾಮಸ್ಥರ ಮಾಹಿತಿ ಮೇರೆಗೆ ತಹಸೀಲ್ದಾರರಾದ ಕುಮಾರಸ್ವಾಮಿ ಎಂ ಇವರ ನಿರ್ದೇಶನದಲ್ಲಿ ಅಧಿಕಾರಿಗಳು ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ, ಗಾಯರಾಣ ಪ್ರದೇಶದಲ್ಲಿ ಮುಂದೆ ಯಾವುದೇ ಗಣಿಗಾರಿಕೆ ನಡೆಯದಂತೆ ಗುಡ್ಡ ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ




