ಯಲಬುರ್ಗಾ ತಾಲೂಕಿನ “ವಿಂಡ್ ಪವರ್ ಕಂಪನಿಯ ದೌರ್ಜನ್ಯ ಪೊಲೀಸರು ಮೌನ”

ವಿಂಡ್ ಪವರ್ ಕಂಪನಿಯಿಂದ ರೈತರ ಮೇಲೆ ದಬ್ಬಾಳಿಕೆ
ಪೊಲೀಸ್ ಮೌನ: ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ
ರೈತ ಮುಖಂಡ ಅರುಣ ಹೆಚ್, ಟಿ.ರತ್ನಾಕರ್ ಆರೋಪ
ಕೊಪ್ಪಳ.
ರಿನ್ಯೂ ಪವರ್ ಎಂಬ ವಿಂಡ್ ಪವರ್ ಕಂಪನಿ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ತಾಲೂಕಿನ ಕೆಲವು ಗ್ರಾಮಗಳ ರೈತರ ಜಮೀನಿನಲ್ಲಿರುವ ಬೆಲೆ ಬಾಳುವ ಮರಗಳನ್ನು ನಾಶ ಮಾಡಿ ನಕಲಿ ಕಡತ ಸೃಷ್ಟಿಸಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಈ ಕುರಿತು ದೂರು ನೀಡಿದರು ಪೊಲೀಸರು ಮೌನವಹಿಸಿದ್ದು, ಜಿಲ್ಲಾಡಳಿತದ ಅಧಿಕಾರಿಗಳು ಕೂಡಾ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ರೈತರಾದ ಅರುಣ ಹಿರಿಯಾಳ್, ಮುಖಂಡ ಟಿ.ರತ್ನಾಕರ್ ಮತ್ತಿತರು ಆರೋಪಿಸಿದ್ದಾರೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ರಿನ್ಯೂ ಪವರ್ ಕಂಪನಿ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ನಕಲಿ ಸಹಿಯೊಂದಿಗೆ ಕೆಲವು ಪತ್ರಗಳನ್ನು ತಯಾರಿಸಿ ಅರಣ್ಯ ಇಲಾಖೆ ಅನುಮತಿ ಪಡೆಯದೇ ರೈತರ ಜಮೀನಿನಲ್ಲಿರುವ ಬೆಲೆ ಬಾಳುವ ಟೀಕ್ ಮರಗಳನ್ನು ಕಡೆದು ಹಾಕಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ಕಂಪನಿ ರೈತರ ಜಮೀನಿನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ೧೯ ಹಳ್ಳಿಗಳ ರೈತರ ಜಮೀನಿನಲ್ಲಿ ಎಸ್‌ಟಿಎಸ್ ಮಾರ್ಗವನ್ನು ರಿನ್ಯೂ ಪವರ್ ಕಂಪನಿ ಅದರ ಉಪ ಕಂಪನಿಗಳಿಂದ ವಿಂಡ್ ಪವರ್ ಜೋಡಿಸುತ್ತಿದೆ. ಎಸ್‌ಸಿ.ಎಸ್‌ಟಿ ರೈತರ ಜಮೀನಿನಲ್ಲಿ ಬಂದು ದಬ್ಬಾಳಿಕೆ ಮಾಡುತ್ತಿದೆ. ಈ ಕುರಿತು ದೂರು ನೀಡಿದರೆ ಪೊಲೀಸರು, ಕಂದಾಯ, ಅರಣ್ಯ ಮತ್ತು ಜಿಲ್ಲಾಧಿಕಾರಿಗಳು ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ. ಕೊಪ್ಪಳ ಸಹಾಯಕ ಆಯುಕ್ತರ ಹೆಸರಿನಲ್ಲಿ ನಕಲಿ ನಡವಳಿಕೆ ಸೃಷ್ಟಿಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಈ ಕುರಿತು ಈಗ ನಾವು ಲೋಕಾಯುಕ್ತ ಮತ್ತು ದೆಹಲಿ ಎನ್‌ಸಿಎಸ್‌ಟಿಗೆ ದೂರು ನೀಡಿದ್ದೇವೆ. ಹಿಂದೆ ಕರ್ತವ್ಯ ನಿರ್ವಹಿಸಿದ್ದ ಜಿಲ್ಲಾಧಿಕಾರಿಗಳು ಕಂಪನಿಯೊಂದಿಗೆ ಶ್ಯಾಮೀಲ್ ಆಗಿದ್ದರು. ಜಿಲ್ಲಾಡಳಿತ ರೈತರ ಬೆಂಬಲಕ್ಕೆ ಬಾರದ ಕಾರಣ ಮಾಧ್ಯಮಗಳ ಮೂಲಕ ಕಂಪನಿ ಮಾಡುತ್ತಿರುವ ಅನ್ಯಾಯವನ್ನು ಬಹಿರಂಗಪಡಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡ ಶರಣಪ್ಪ ಗುಂಗಾಡಿ ಮತ್ತಿತರು ಇದ್ದರು.