ಕೊಪ್ಪಳದಲ್ಲಿ ಬಸವ ಸಂಸ್ಕೃತಿ ಅಭಿಯಾನ : ಬಸವರಾಜ್ ಬಳ್ಳೊಳ್ಳಿ

ಕೊಪ್ಪಳ : ಸೆಪ್ಟೆಂಬರ್ 1 ರಿಂದ ಕರ್ನಾಟಕ ರಾಜ್ಯದಾದ್ಯಂತ ಆರಂಭವಾಗಿರುವ ‘ಬಸವ ಸಂಸ್ಕೃತಿ ಅಭಿಯಾನ’ವು ಪ್ರತಿ ದಿನ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ನಡೆದು, ಅಕ್ಟೋಬರ್ 5 ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಬಸವ ಸಂಸ್ಕೃತಿ ಅಭಿಯಾನ’ ಕೊಪ್ಪಳದಲ್ಲಿ ಈ ಅಭಿಯಾನ ಇದೇ ಸೋಮವಾರ, ಸೆಪ್ಟೆಂಬರ್ 8 ರಂದು ಜರುಗಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ್ ಬಳ್ಳೊಳ್ಳಿ ಹೇಳಿದರು.
ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕಮಹಾದೇವಿ ಮಹಿಳಾ ಮಂಡಳ ಮತ್ತು ಕೊಪ್ಪಳದ ಸರ್ವ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಕೊಪ್ಪಳದ ಬಸವ ಸಂಸ್ಕೃತಿ ಅಭಿಯಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಆ ದಿನ ಮುಂಜಾನೆ 11 ರಿಂದ 12 ಗಂಟೆಯವರೆಗೆ ಕಿಡದಾಳನ ಶಾರದಾ ಪಿ.ಯು. ಕಾಲೇಜು ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಬಸವ ಸಂಸ್ಕೃತಿ ಅಭಿಯಾನದ ಎಲ್ಲ ಪೂಜ್ಯ ಮಠಾಧೀಶರುಗಳೊಂದಿಗೆ ‘ವಚನ ಸಂವಾದ’ ನಡೆಯಲಿದೆ. ಸಂಜೆ 5 ರಿಂದ 6 ಗಂಟೆಯವರೆಗೆ ಶ್ರೀ ಬಸವೇಶ್ವರ ವೃತ್ತದಿಂದ (ಗಂಜ್ ಸರ್ಕಲ್) ಮಧುಶ್ರೀ ಗಾರ್ಡನವರೆಗೆ ಪಾದಯಾತ್ರೆ ಇದ್ದು, ನಂತರ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ್ಸ್ನಲ್ಲಿ ‘ಬಸವ ಸಂಸ್ಕೃತಿ ಅಭಿಯಾನದ ವೇದಿಕೆ ಕಾರ್ಯಕ್ರಮ’ ನಡೆಯಲಿದೆ. ಮುಖ್ಯ ಉಪನ್ಯಾಸಕರಾಗಿ ಶ್ರೀ ಗುರುಬಸವ ಮಹಾಮನೆ, ಚನ್ನಯ್ಯಗಿರಿ, ಮನಗುಂಡಿಯ ಶ್ರೀ ಬಸವಾನಂದ ಸ್ವಾಮಿಗಳು ‘ಬಸವ ಸಂಸ್ಕೃತಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ’ ಕುರಿತಾಗಿಯೂ ಮತ್ತು ಕಲಬುರಗಿಯ ಸಾಹಿತಿಗಳಾದ ಡಾ. ಕಾವ್ಯಶ್ರೀ ಮಹಾಗಾಂವಕರ ಇವರು ‘ವಚನ ಚಳುವಳಿ ಇಂದಿನ ಅಗತ್ಯ’ ಕುರಿತಾಗಿ ಮಾತನಾಡುವರು.
ಕೊಪ್ಪಳ ಜಿಲ್ಲೆಯ ಮತ್ತು ಬಸವ ಸಂಸ್ಕೃತಿ ಅಭಿಯಾನದ ಎಲ್ಲ ಪೂಜ್ಯ ಮಠಾಧೀಶರು ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಬಸವ ಚಿಂತಕರು, ಬೃಹತ್ ಸಂಖ್ಯೆಯಲ್ಲಿ ಬಸವಾನುಯಾಯಿಗಳು ಪಾಲ್ಗೊಳ್ಳಲಿದ್ದಾರೆ.
ವೇದಿಕೆ ಕಾರ್ಯಕ್ರಮದ ನಂತರ ರಾತ್ರಿ 8 ರಿಂದ 8-30 ರ ವರೆಗೆ ಸಾಣೆಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ‘ಜಂಗಮದೆಡೆಗೆ’ ನಾಟಕವನ್ನು ಸಾಣೆಹಳ್ಳಿಯ ಶಿವಸಂಚಾರ ಕಲಾತಂಡ ಪ್ರದರ್ಶಿಸಲಿದೆ. ಆನಂತರ ಪ್ರಸಾದದ ಸ್ವೀಕಾರ ನಡೆಯಲಿದೆ.
ಈ ಮಹತ್ತರ ಅಭಿಯಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ಬಸವಾನುಯಾಯಿಗಳು ಆಗಮಿಸಿ ಈ ಅಭಿಯಾನದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು
ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ್ ಕುಕುನೂರ, ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಸಿಮಠ, ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ ಶೇಖರ್ ಇಂಗಳದಾಳ ಉಪಸ್ಥಿತರಿದ್ದರು.