ಒಳಮೀಸಲಾತಿ ಜಾರಿ: ಸಿಎಂಗೆ ಅಭಿನಂದನಾ ಸಮಾರಂಭ– ಗಾಳೆಪ್ಪ ಪೂಜಾರ್

ಕೊಪ್ಪಳ: ಜೀಬಿ ನ್ಯೂಸ್ ಕನ್ನಡ ಸುದ್ದಿ
ಪರಿಶಿಷ್ಟ ಸಮುದಾಯದಲ್ಲಿನ ನೊಂದ ಜನರಿಗೆ ಒಳಮೀಸಲಾತಿ ಜಾರಿ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಮಾದಿಗ ಸಮಾಜದ ಮುಖಂಡ ಗಾಳೆಪ್ಪ ಪೂಜಾರ್ ಹೇಳಿದರು.
ನಗರದ ತಹಸೀಲ್ ಕಚೇರಿಯಲ್ಲಿನ ಕೆಯುಡಬ್ಲ್ಯೂಜೆ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಳಮೀಸಲಾತಿ ಜಾರಿಗಾಗಿ ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹಲವಾರು ಅಡತಡೆಗಳ ಮಧ್ಯೆಯು ಕೂಡ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯಲ್ಲಿ ಮಾದಿಗ ಮತ್ತು ಮಾದಿಗ ಉಪಜಾತಿಗಳನ್ನು ಪ್ರವರ್ಗ-1ಕ್ಕೆ ಸೇರಿಸಿ ಮಾದಿಗರಿಗೆ ಸಿಗಬೇಕಾದ ಶೇ.6 ಮೀಸಲಾತಿ ನೀಡಿ, ಪರಿಶಿಷ್ಟ ಜಾತಿಗಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಚಿವರು, ಎಲ್ಲಾ ಶಾಸಕರು ಮಾಡಿದ್ದಾರೆ. ಒಳಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಹಗಲಿರುಳು ಪ್ರತಿಭಟನೆ, ಕಾಲ್ನಡಿಗೆ, ಅರೆಬೆತ್ತಲೆ ಮೆರವಣಿಗೆ, ಉಪವಾಸ ಸತ್ಯಾಗ್ರಹ, ಅನಿರ್ದಿಷ್ಟ ಧರಣಿ ಸತ್ಯಾಗ್ರಹ, ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಸೇರಿದಂತೆ ಅನೇಕ ಹೋರಾಟ ಮಾಡಿದರ ಫಲವಾಗಿ ನಮಗೆ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದರು.
ಒಳಮೀಸಲಾತಿ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯನವರು ಸೇರಿದಂತೆ ಸಚಿವರಿಗೆ ಹಾಗೂ ಶಾಸಕರಿಗೆ ಜಿಲ್ಲಾ ಮಾದಿಗ ಸಮಾಜದಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಿ, ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯನವರ ಕೊಪ್ಪಳ ಭೇಟಿ ದಿನಾಂಕ ನಿಗದಿಪಡಿಸಿಕೊಂಡು ಕಾರ್ಯಕ್ರಮದ ರೂಪರೇಷ ತಯಾರಿಸಿ, ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ. ಅಲ್ಲದೇ
ಒಳಮೀಸಲಾತಿ ಜಾರಿಗಾಗಿ ಹೋರಾಡಿದ ಅನೇಕ ಹಿರಿಯ ಜೀವಗಳು ನಮ್ಮನ್ನು ಅಗಲಿದ್ದು, ಅವರಿಗೆ ಸಂತಾಪ ಸೂಚಿಸುವ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಹನುಮೇಶ ಕಡೇಮನಿ, ರಾಮಣ್ಣ ಚೌಡ್ಕಿ, ಯಲ್ಲಪ್ಪ ಹಳೇಮನಿ, ನಿಂಗಜ್ಜ ಬಂಡಿಹರ್ಲಾಪುರ, ಪರಶುರಾಮ ಕೆರೆಹಳ್ಳಿ, ಮಲ್ಲು ಪೂಜಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫೋಟೋ: ಕೊಪ್ಪಳದ ತಹಸೀಲ್ ಕಚೇರಿಯ ಕೆಯುಡಬ್ಲ್ಯೂಜೆ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಾಳೆಪ್ಪ ಪೂಜಾರ್ ಮಾತನಾಡಿದರು.