ಕೊಪ್ಪಳದಲ್ಲಿ ಕೊಲೆಯಾದ ಗವಿಸಿದ್ದಪ್ಪನ ಕುಟುಂಬದ ವಿರುದ್ಧ ಪೋಕ್ಸೋ; ರಾಜಕೀಯ ತಿರುವು ಪಡೆದ ಕೊಲೆಯ ಪ್ರಕರಣ

ಕೊಪ್ಪಳದಲ್ಲಿ ಕೊಲೆಯಾದ ಗವಿಸಿದ್ದಪ್ಪ ಮತ್ತು ಆತನ ಕುಟುಂಬದ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿಯ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ, ಕೊಲೆ ಪ್ರಕರಣವು ರಾಜಕೀಯ ತಿರುವು ಪಡೆದಿದ್ದು, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಮೃತ ಗವಿಸಿದ್ದಪ್ಪ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.

- ಗವಿಸಿದ್ದಪ್ಪ ಕೊಲೆ ಪ್ರಕರಣಕ್ಕೆ ಟ್ವಿಸ್ಟ್; ಮೃತನ ತಂದೆ-ತಾಯಿ ವಿರುದ್ಧ ಪೋಕ್ಸೊ ಪ್ರಕರಣ.
- ಮೃತ ಗವಿಸಿದ್ದಪ್ಪ , ತಂದೆ ನಿಂಗಜ್ಜ, ತಾಯಿ ದೇವಮ್ಮ ಹಾಗೂ ಸಹೋದರಿ ಅನ್ನಪೂರ್ಣಾ ವಿರುದ್ಧ ಕೇಸ್.
- ನನ್ನ ಎರಡನೇ ಮಗಳ ಮೇಲೆ ಮೃತ ಯುವಕನಿಂದ ನಿರಂತರ ಎರಡು ವರ್ಷ ಅತ್ಯಾಚಾರವಾಗಿದೆ ಎಂದು ಮಹಿಳೆ ದೂರು.
ಕೊಪ್ಪಳ: ಗವಿಸಿದ್ದಪ್ಪ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗವಿಸಿದ್ದಪ್ಪ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನನ್ವಯ ಮೃತ ಗವಿಸಿದ್ದಪ್ಪ , ತಂದೆ ನಿಂಗಜ್ಜ, ತಾಯಿ ದೇವಮ್ಮ ಹಾಗೂ ಸಹೋದರಿ ಅನ್ನಪೂರ್ಣಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಕೀಯ ತಿರುವು ಪಡೆದ ಪ್ರಕರಣ
ಮೃತ ಗವಿಸಿದ್ದಪ್ಪನ ತಂದೆ – ತಾಯಿಯೊಂದಿಗೆ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದ ನಿಯೋಗ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ, ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಆಗ್ರಹಿಸಿತ್ತು. ಮನವಿ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಯುವಕನ ತಂದೆ ನಿಂಗಜ್ಜ, ನೇರವಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಅವರ ಬೆಂಬಲಿಗರ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಧ್ಯಮಗಳ ಎದುರು ಮಾತನಾಡುತ್ತಿದ್ದ ನಿಂಗಜ್ಜ ಅವರಿಗೆ ಕಿವಿಯಲ್ಲಿ ಹೇಳಿದ ಮಾತು ಕಾಂಗ್ರೆಸ್ ವಲಯದಲ್ಲಿ ಏಕಾಏಕಿ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಇದರ ಮರುದಿನವೇ ಬಾಲಕಿಯ ತಾಯಿ ತನ್ನ ಹಿರಿಮಗಳೊಂದಿಗೆ ಜಿಲ್ಲಾಡಳಿತ ಭವನದ ಎದುರು, ದಿಢೀರ್ ಪ್ರತಿಭಟನೆ ನಡೆಸಿದ್ದರು.
ಮೃತ ಗವಿಸಿದ್ಧಪ್ಪನಿಂದ 2 ವರ್ಷ ಅತ್ಯಾಚಾರ
”ನನ್ನ ಎರಡನೇ ಮಗಳ ಮೇಲೆ ಮೃತ ಯುವಕನಿಂದ ನಿರಂತರ ಎರಡು ವರ್ಷ ಅತ್ಯಾಚಾರವಾಗಿದೆ. ಕೊಲೆಯಲ್ಲಿ ನನ್ನ ಮಗಳ ಪಾತ್ರವಿಲ್ಲದಿದ್ದರೂ, ಸುಖಾಸುಮ್ಮನೆ ಎಳೆದು ತರಲಾಗುತ್ತಿದೆ,” ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದ ಬಳಿಕ ಎಸ್ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ
ಗವಿಸಿದ್ದಪ್ಪ ನಾಯಕ(30) ಎಂಬುವವನ್ನು ಕೊಪ್ಪಳ ನಗರದ ಬಹದ್ದೂರಬಂಡಿ ರಸ್ತೆಯ ಬಳಿ ಅನ್ಯಕೋಮಿನ ಯುವಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಅನ್ಯಧರ್ಮದ ಯುವತಿ ಪ್ರೀತಿ ಮಾಡಿದ ವಿಚಾರಕ್ಕೆ ಯುವಕನನ್ನು ಹಧಿತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಲಾನ್‌ಪುರ ಓಣಿಯ ನಿವಾಸಿ ಸಾದಿಕ್ ಹುಸೇನ್ ಕೊಲ್ಕಾರ್ ಎಂಬಾತ ಪೊಲೀಸರಿಗೆ ಶರಣಾಗಿದ್ದನು. ಇನ್ನುಳಿದಂತೆ ಈತನೊಂದಿಗಿದ್ದು, ಘಟನೆ ಬಳಿಕ ನಾಪತ್ತೆಯಾಗಿದ್ದ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.