ಒಳಮೀಸಲಾತಿ ಜಾರಿ ಮಾಡಿ ಅಥವಾ ರಾಜೀನಾಮೆ ಕೊಡಿ- ಗಣೇಶ್ ಹೊರತಟ್ನಾಳ ಒತ್ತಾಯ
ಒಳಮೀಸಲಾತಿ ಜಾರಿ ಮಾಡಿ ಅಥವಾ ರಾಜೀನಾಮೆ ಕೊಡಿ- ಗಣೇಶ್ ಹೊರತಟ್ನಾಳ ಒತ್ತಾಯ
ಕೊಪ್ಪಳ ಅಕ್ಟೋಬರ್ 17 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ನಮ್ಮ ಸಮಾಜದ ಮೇಲೆ ಕಳಕಳಿ ಇದ್ದರೆ, ಸುಪ್ರೀಂ ಕೋರ್ಟ್ ನೀಡಿರುವ ಒಳಮೀಸಲಾತಿ ಆದೇಶ ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಗಣೇಶ್ ಹೊರತಟ್ನಾಳ ಒತ್ತಾಯಿಸಿದರು.
ಬುಧವಾರ ನಗರದ ಡಿಸಿ ಕಚೇರಿ ಬಳಿ,ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಆಗ್ರಹಿಸಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಕೊಪ್ಪಳ ಜಿಲ್ಲಾ ಹಾಗೂ ದಲಿತಪರ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ದಲಿತ ಸಮಾಜದ ಮುಖಂಡರಾದ ಗಣೇಶ್ ಹೊರತಟ್ನಾಳ ರವರು ಮಾತನಾಡಿ,ಒಳ ಮೀಸಲಾತಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಹಮತವಿದೆ. ಹಿಂದೆ ಬಿಜೆಪಿ ಸರ್ಕಾರ ಈ ಬಗ್ಗೆ ಪ್ರಯತ್ನ ನಡೆಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಒಳ ಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿದೆ ಇದು ಸರಿಯಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, ಒಳ ಮೀಸಲಾತಿ ಬಗ್ಗೆ ದೊಡ್ಡದಾಗಿ ಮಾತಾಡುತ್ತಾರೆ. ಒಳ ಮೀಸಲಾತಿಯ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ರವರು ತೆಲಂಗಾಣದಲ್ಲಿ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ನಡೆದ ಸಭೆಗೆ ಬಂದಾಗ ಒಳ ಮೀಸಲಾತಿಗೆ ಅನುಮೋದನೆಗೆ ಬೆಂಬಲ ನೀಡಿದ್ದಾರೆ. ಆದರೂ ಕಾಂಗ್ರೆಸ್ ಸರಕಾರ ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಒಳಮೀಸಲಾತಿ ಜಾರಿ ಮಾಡಬೇಕು ಇಲ್ಲವಾದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ನಂತರ ಮಾದಿಗ ದಂಡೂರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲೂಕ ಅಧ್ಯಕ್ಷರಾದ ನಿಂಗಪ್ಪ ಹೊಸಮನಿ ಮಾತನಾಡಿ,ಮಾದಿಗ ಸಮಾಜದ ನೇತೃತ್ವದಲ್ಲಿ ಒಳಮೀಸಲಾತಿಗಾಗಿ 3 ದಶಕಗಳಿಂದ ಹೋರಾಟ ನಡೆದಿದೆ. ಒಳಮೀಸಲಾತಿ ಕಲ್ಪಿಸುವುದಕ್ಕೆ ಇದ್ದ ಸಂವಿಧಾನಿಕ ಅಡೆಚಣೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ನಿವಾರಣೆಯಾಗಿದೆ. ಆದರೂ ಈವರೆಗೆ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಮುಂದಾಗದಿರುವುದು ದುರದೃಷ್ಟಕರ. ಇನ್ನೂ ತಡ ಮಾಡುವುದು ಸರಿಯಲ್ಲ. ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಜಾರಿ ಮಾಡದೆ ಹೋದರೆ ಸಮಾಜದ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿಗಳು ನೆಪ ಹೇಳದೇ ಕೂಡಲೇ ಒಳಮೀಸಲಾತಿ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ರವರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮತ್ತು ರಾಜ್ಯದ ರಾಜ್ಯಪಾಲರಿಗೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಮಾದಿಗ ದಂಡೂರು ರಾಜ್ಯಾಧ್ಯಕ್ಷರಾದ ಬಿ ಹುಸೇನಪ್ಪ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ದಲಿತ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು.