ನೊಂದಾಯಿತ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ
.15ರಂದು ನೊಂದಾಯಿತ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ -- ರಮೇಶ ಘೋರ್ಪ

ಕೊಪ್ಪಳ: ನೊಂದಾಯಿತ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗಾಗಿ ಜು.15ರಂದು ನಗರದ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೊಂದಾಯಿತ ಕಾರ್ಮಿಕ ಸಂಘದ ಅಧ್ಯಕ್ಷ ರಮೇಶ ಘೋರ್ಪಡೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹೊಸದಾಗಿ ಜಾರಿಗೊಳಿಸಿದ ಕುಟುಂಬ ಐ ಡಿ ಅಪ್ಲಿಕೇಷನ್ ರದ್ದುಗೊಳಿಸಿ, ನೈಜ ಕಾರ್ಮಿಕರ ವಿವಿಧ ಸೌಲಭ್ಯಗಳ ಅರ್ಜಿಗಳನ್ನು ಸಕಾರಣವಿಲ್ಲ ತಿರಸ್ಕರಿಸುವುದನ್ನು ತಡೆಯಬೇಕು.ಸೇವಾ ಸಿಂಧುವಿನಲ್ಲಿ ಅರ್ಜಿಗಳ ಮಂಜೂರಾತಿಯಾದ ಫಲಾನುಭವಿಗಳಿಗೆ ಹೆರಿಗೆ ಮತ್ತು ಮದುವೆ ಸಹಾಯಧನದ ಬಾಂಡಗಳನ್ನು ಇಲ್ಲಿಯವರೆಗೂ ನೀಡಿಲ್ಲ. ಬಾಂಡ್ ವಿಲೇವಾರಿಗೆ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 1.86 ಲಕ್ಷ ನೊಂದಾಯಿತ ಕಾರ್ಮಿಕರಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ಸಿಗುತ್ತಿಲ್ಲ. ಅಲ್ಲದೇ 2024 ರಿಂದ ಮಂಜೂರಾದ ಕೆಲವು ವಿವಿಧ ರೀತಿಯ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಗಳಿಗೆ ಈವರೆಗೂ ಹಣ ಜಮಾ ಆಗಿಲ್ಲ.ಕಾರ್ಮಿಕರ ಕಾರ್ಡ್ ನವೀಕರಣವನ್ನು ಮೂರು ವರ್ಷಕ್ಕೆ ನವೀಕರಣ ಮಾಡಲು ತ್ವರಿತವಾಗಿ ಆದೇಶಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಮದುವೆ ಸಹಾಯಧನವನ್ನು 60 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಜು.15ರಂದು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಒತ್ತಾಯ ಮಾಡುತ್ತೇವೆ. ಅಂದು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 4 ಸಾವಿರ ನೊಂದಾಯಿತ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವು ಮಾಲೂರು, ಶರಣಪ್ಪ, ಶಿವಕುಮಾರಗೌಡ, ಮಹೇಶ, ದಾದಾಫೀರ್ ಮುದಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್: ಕೊಪ್ಪಳ ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ನೊಂದಾಯಿತ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಘೋರ್ಪಡೆ ಮಾತನಾಡಿದರು.