ಡಾ: ರಾಧಾಕೃಷ್ಣ ಪಬ್ಲಿಕ್ ಶಾಲೆಯಲ್ಲಿ ಗ್ರಾಹಕರ ಮೋಡಿ ಮಾಡಿದ ‘ಚಿಣ್ಣರ ಸಂತೆ’

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಚಿಣ್ಣರ ಸಂತೆಯಲ್ಲಿ ಬನ್ನಿ ಸಾರ್, ಬನ್ನಿ ಅಮ್ಮ ಜ್ಯೂಸ್ ತೆಗೆದುಕೊಳ್ಳಿ. ಆಂಟಿ,ತರಕಾರಿ ಬೇಕಾ ಅಂಕಲ್, ಸ್ಪೇಷಲ್ ಗಿರಿಮಿಟ್,ಬೇಕಾ ಯಾವುದು ಬೇಕು ಬಂದು ಆರಿಸಿಕೊಳ್ಳಿ ಬನ್ನಿ ಎಂದು ಕೂಗುವ ಧ್ವನಿ ಒಂದೆಡೆಯಾದರೆ, 50 ರೂಪಾಯಿ ಬಾಳೆಹಣ್ಣು, 10 ರೂಪಾಯಿ ಹಪ್ಪಳ, ತಿನ್ನಿ ಎಂದು ಥೇಟ್ ವ್ಯಾಪಾರಸ್ಥರಂತೆ ಮಾರಾಟಕ್ಕೆ ನಿಂತ ಚಿಣ್ಣರ ಸಾಲು ಮತ್ತೊಂದೆಡೆ.ಇಲ್ಲಿನ ಡಾ:ರಾಧಾಕೃಷ್ಣ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಚಿಣ್ಣರ ಸಂತೆ’ಯಲ್ಲಿ ಮಕ್ಕಳು ಮಾರಾಟದಲ್ಲಿ ತೊಡಗಿದ್ದ ಪರಿಯಿದು. ನೂರಾರು ಮಕ್ಕಳು ಸ್ಪರ್ಧೆಗೆ ಬಿದ್ದವರಂತೆ ಮಾರಾಟದಲ್ಲಿ ತೊಡಗಿದ್ದು ನೆರೆದವರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಇಡೀ ಶಾಲಾ ಮೈದಾನದಲ್ಲಿ ಚಿಣ್ಣರ ಚಿಲಿಪಿಲಿಯಲ್ಲಿ ತುಂಬಿ, ಹಿರಿಯರೂ ಮಕ್ಕಳಾದರು.
ಚಿಣ್ಣರ ಸಂತೆಯ ತುಂಬೆಲ್ಲಾ ಮಕ್ಕಳದ್ದೇ ಕಲರವ. ಜಾಮೂನು, ರವೆ ಉಂಡೆ, ಕೋಡುಬಳೆ, ಬಜ್ಜಿ, ಕಜ್ಜಾಯ, ಕೊಬ್ಬರಿ ಮಿಠಾಯಿ, ಚಕ್ಕುಲಿ, ಹೆಸರುಂಡೆ, ಚೂಡಾ ಮೊದಲಾದ ಸಾಂಪ್ರದಾಯಿಕ ತಿನಿಸುಗಳನ್ನು ಮಕ್ಕಳು ಮನೆಯಿಂದ ತಂದು ಮಾರಾಟ ಮಾಡಿದರು
ಪಾನಿಪುರಿ, ಮಸಾಲಾ ಪುರಿ, ಚುರುಮುರಿ, ಬಜ್ಜಿ, ಫಿಂಗರ್ ಚಿಪ್ಸ್ ಸೇರಿದಂತೆ ತರಹೆವಾರಿ ಸ್ಪ್ಯಾಕ್ಸ್‌ಗಳನ್ನು ತಾವೇ ಮಾಡಿ ಮಾರಿದರು. ಭರ್ಜರಿ ವ್ಯಾಪಾರ ಮಾಡಿ ಶಿಕ್ಷಕರು, ಪೋಷಕರ ಮೆಚ್ಚುಗೆಗೆ ಪಾತ್ರರಾದರು.
ವಿವಿಧ ಬಗೆಯ ತರಕಾರಿ, ಸೊಪ್ಪುಗಳನ್ನು ಜೋಡಿಸಿ ಇರಿಸಿಕೊಂಡು ವ್ಯಾಪಾರಿಗಳಂತೆ ವಹಿವಾಟು ನಡೆಸಿದರು. ಸೊಪ್ಪು ಎಷ್ಟು? ಒಣಗಿ ಹೋಗಿದೆಯಲ್ಲ, ಸ್ವಲ್ಪ ರೇಟ್ ಕಡಿಮೆ ಮಾಡಿ ಕೊಡು. ಇಲ್ಲದಿದ್ದರೆ ಬೇರೆಯದ್ದು ಚೆನ್ನಾಗಿರೋದು ಕೊಡಪ್ಪ ಎಂಬ ಮಾತುಗಳನ್ನು ಆಡುತ್ತಾ ಮಕ್ಕಳ ವ್ಯವಹಾರ ಜ್ಞಾನವನ್ನು ಪೋಷಕರು ಪರೀಕ್ಷಿಸಿದರು.
‘ಸೊಪ್ಪು ಬಾಡಿಲ್ಲ, ಚೆನ್ನಾಗಿಯೇ ಇದೆ. ನೀರು ಚುಮುಕಿಸಿದರೆ ಫ್ರೆಶ್ ಆಗಿ ಕಾಣಿಸುತ್ತೆ. ರೈತರು ಕಷ್ಟಪಟ್ಟು ಬೆಳೆದದ್ದು. ಹಾಗೆಲ್ಲ ಚೌಕಾಸಿಗೆ ಇಳಿಬಾರದು. ಒಮ್ಮೆ ತಗೊಂಡು ಅಡುಗೆ ಮಾಡಿ ನೋಡಿ ಗೊತ್ತಾಗುತ್ತೆ’ ಎಂದು ಪೋಷಕರ ಮನವೊಲಿಸಿ ಮಕ್ಕಳು ತರಕಾರಿ ಮಾರಿದ್ದು ಕಂಡುಬಂತು.ಐಸ್‌ಕ್ರೀಮ್, ಹಾಲು ಮತ್ತು ಬೇಕರಿ ಉತ್ಪನ್ನಗಳು,ಸ್ಟೇಷನರಿ, ಹಣ್ಣುಗಳು ಸೇರಿದಂತೆ ವಿವಿಧ ಸಾಮಗ್ರಿ ಹಾಗೂ ಪದಾರ್ಥಗಳನ್ನು ಮಾರಾಟ ಮಾಡಿದ ಮಕ್ಕಳು, ಮಾರಾಟದಿಂದ ಬಂದ ಹಣವನ್ನು ಎಣಿಸುವತ್ತ ಗಮನಹರಿಸಿದರು.
ವ್ಯವಹಾರಿಕ ಜ್ಞಾನ ವೃದ್ಧಿ’
ಮಕ್ಕಳಲ್ಲಿ ವಿಷಯಗಳ ಜ್ಞಾನದ ಜತೆಗೆ ವ್ಯವಹಾರಿಕ ಜ್ಞಾನ ಹಾಗೂ ದುಡಿಮೆಯ ಮಹತ್ವ ತಿಳಿಸುವ ಉದ್ದೇಶದಿಂದ ಚಿಣ್ಣರ ಸಂತೆ ಆಯೋಜಿಸಲಾಗಿದೆ’ ಎಂದು ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಮೆನೆದಾಳ ಹೇಳಿದರು. ‘ತರಗತಿಯ ಹೊರಗಡೆ ಬಂದು ನೂರಾರು ಜನರ ನಡುವೆ ವಹಿವಾಟಿನಲ್ಲಿ ತೊಡಗಿಸಿಕೊಂಡರೆ ಸಂವಹನ ಕೌಶಲ ವೃದ್ಧಿಯಾಗುತ್ತದೆ. ಆತ್ಮವಿಶ್ವಾಸವೂ ಬೆಳೆಯುತ್ತದೆ. ಲಾಭ-ನಷ್ಟದ ಬಗ್ಗೆಯೂ ಗೊತ್ತಾಗುತ್ತದೆ. ವಿದ್ಯಾರ್ಥಿಗಳು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.