“ಲಕ್ಷ್ಯ” ಸಿನಿಮಾ ಆಲಕ್ಷಿಸಬೇಡಿ ಮಕ್ಕಳೊಂದಿಗೆ ನೋಡಲೇಬೇಕಾದ ಸಿನಿಮಾ

ಇಂದಿನಿಂದ ರಾಜ್ಯದ ವಿವಿಧೆಡೆ ಲಕ್ಷ್ಯ ಸಿನಿಮಾ ತೆರೆಗೆ
— ಸಹ ನಿರ್ದೇಶಕ ಮಂಜುನಾಥ ಪೂಜಾರ್
— ಉತ್ತರ ಕರ್ನಾಟಕದ ಪಕ್ಕಾ ಜವಾರಿ ಸಿನಿಮಾ
— ರಾಜ್ಯದ 28 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ
ಕೊಪ್ಪಳ: ಉತ್ತರ ಕರ್ನಾಟಕದ ಪಕ್ಕ ಜವಾರಿ ಭಾಷೆ ಶೈಲಿಯ ಹಾಗೂ ಶಾಲಾ ಮಕ್ಕಳ ಕುರಿತು ಕಥಾಹಂದರ ಒಳಗೊಂಡ ಲಕ್ಷ್ಯ ಸಿನಿಮಾ ಇಂದಿನಿಂದ ರಾಜ್ಯದ 28 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರ ತಂಡದ ಸಹ ನಿರ್ದೇಶಕ ಮಂಜುನಾಥ ಪೂಜಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಮೂಲದ ಅರ್ಜುನ ಪಿ. ಡೊಣೂರ ಅವರು ‘ಲಕ್ಷ್ಯ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ‘ಸಾಮ್ರಾಟ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಲಕ್ಷ್ಯ ಸಿನಿಮಾ ‘ಇದೊಂದು ಮಕ್ಕಳ ಸಿನಿಮಾ. ಮಕ್ಕಳು ಯಾವ ವಿಷಯಕ್ಕೆ ಲಕ್ಷ್ಯ ಕೊಡುತ್ತಾರೆ, ಅದರಿಂದ ಏನಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ ಈ ಸಿನಿಮಾದಲ್ಲಿದೆ. ಇಲ್ಲಿನ ಕಲಾವಿದರೇ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳ ಚಿತ್ರ ಆದ್ದರಿಂದ ಬಹುತೇಕ ಮಕ್ಕಳೇ ಇದರಲ್ಲಿ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ’ ಎಂದು ಹೇಳಿದರು.
ಲಕ್ಷ್ಯ’ ಸಿನಿಮಾದ 3 ಹಾಡುಗಳಿಗೆ ಆರವ್ ರಿಶಿಕ್ ಅವರು ಸಂಗೀತ ಸಂಯೋಜಿಸಿದ್ದಾರೆ. ಡಾ. ದೊಡ್ಡರಂಗೇಗೌಡ, ಶಂಕರ ಪಾಗೋಜಿ ಹಾಗೂ ಶಿವಾನಂದ ಭೂಶಿ ಅವರು ಸಾಹಿತ್ಯ ಬರೆದಿದ್ದಾರೆ. ಅನಿರುದ್ದ ಶಾಸ್ತ್ರೀ, ಚೇತನ್ ನಾಯಕ್, ಮದ್ವೇಶ್ ಭಾರದ್ವಾಜ್ ಮುಂತಾದವರು ಹಾಡುಗಳು ಧ್ವನಿಯಾಗಿದ್ದಾರೆ. ಎಂ.ಬಿ. ಅಳ್ಳಿಕಟ್ಟಿ ಅವರ ಛಾಯಾಗ್ರಹಣ, ಆರ್. ಮಹಾಂತೇಶ್ ಅವರ ಸಂಕಲನ ಈ ಚಿತ್ರಕ್ಕಿದೆ ಎಂದರು.

ಉತ್ತರ ಕರ್ನಾಟಕದ ಬಾಗಲಕೋಟೆ, ಕೂಡಲ ಸಂಗಮ ಸುತ್ತಮುತ್ತ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಸುಮಾರು 80 ಲಕ್ಷ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ ಸ್ವಪ್ನ ಮತ್ತು ಕೊಪ್ಪಳದ ಶಿವ ಚಿತ್ರ ಮಂದಿರ ಸೇರಿದಂತೆ ರಾಜ್ಯದ 28 ಚಿತ್ರ ಮಂದಿರಗಳಲ್ಲಿ ಲಕ್ಷ್ಯ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಶಾಲಾ ಮಕ್ಕಳ ಮತ್ತು ಕೌಟುಂಬಿಕ ಸಿನಿಮಾವನ್ನು ರಾಜ್ಯದ ಜನತೆ ಕೈಹಿಡಿದು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಶಹಾಪುರ, ಕಲಾವಿದರಾದ ಮಾಸ್ಟರ್ ತೇಜಸ್ ಪೂಜಾರ, ಗೀತಾ ಎಂ. ಪೂಜಾರ್ ಉಪಸ್ಥಿತರಿದ್ದರು.