ಕೊಪ್ಪಳಜಿಲ್ಲಾ ಸುದ್ದಿ

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು

ಕೊಪ್ಪಳ : ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಾಗಿದ್ದು, ಪತ್ರಕರ್ತರಿಗೆ ಸಾಮಾಜಿಕ ಕಳಕಳಿ ಅತಿ ಅವಶ್ಯವಾಗಿದೆ ಎಂದು ಕುಕನೂರಿನ ಮಹಾದೇವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅಳವಂಡಿ ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಳವಂಡಿ ಹೋಬಳಿ ಪತ್ರಕರ್ತರು ಹಾಗೂ ಎಸ್ಎಸ್ ಪಿಯು ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಎನ್ಎಸ್ಎಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.

ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜೊತೆಗೆ ಬದಲಾವಣೆ ಕಾಣಲು ಎನ್ಎಸ್ಎಸ್ ಸಹಕಾರಿಯಾಗಿದೆ. ಎನ್ಎಸ್ಎಸ್ ಶಿಸ್ತು, ಏಕಾಗ್ರತೆ, ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಗುಣ ಮತ್ತು ನಡುವಳಿಕೆಯನ್ನು ಕಲಿಸಿಕೊಡುತ್ತದೆ ಎಂದರು.

‌ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಮಾತನಾಡಿ, ಬದುಕಿನಲ್ಲಿ ಜ್ಞಾನ ಅತಿ ಮುಖ್ಯವಾಗಿದೆ. ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ, ಸುಂದರ ಸಮಾಜ ನಿರ್ಮಿಸುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾಗಿ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಮಾತನಾಡಿ, ಪತ್ರಕರ್ತರು ಎಂದರೇ ವಿರೋಧ ಪಕ್ಷದ ನಾಯಕರು ಇದ್ದಹಾಗೆ, ಸಮಾಜ ತಿದ್ದುವ ಕೆಲಸದಲ್ಲಿ ಸದಾ ನಿರತರಾಗಿರುತ್ತಾರೆ. ಸಮಾಜ, ಆಡಳಿತದಲ್ಲಿ ಪಾರದರ್ಶಕತೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು ಎಂದರು.

ಕೊಪ್ಪಳ ವಿವಿಯ ಉಪನ್ಯಾಸಕ ಡಾ.ಪ್ರವೀಣಕುಮಾರ ಪೋಲಿಸ್ ಪಾಟೀಲ ಮಾತನಾಡಿ, ಎನ್ಎಸ್ಎಸ್ ಮಾತನಾಡುವ ಗುಣ, ಸಮಯದ ಪ್ರಜ್ಞೆ, ನಾಯಕತ್ವದ ಗುಣ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಸಂದರ್ಭಕ್ಕನುಸಾರವಾಗಿ ಕೆಲಸ ಮಾಡುವುದನ್ನು ಕಲಿಸುತ್ತದೆ. ಸಮಾಜದ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಪತ್ರಕರ್ತರ ಸತತ ಪರಿಶ್ರಮ ಶ್ಲಾಘನೀಯ ಎಂದರು.

ಕೊಪ್ಪಳ ವಿವಿಯ ಉಪನ್ಯಾಸಕ ಸಂತೋಷಕುಮಾರ ಮಾತನಾಡಿ, ಪತ್ರಕರ್ತರು ಸಮಾಜಮುಖಿ ಕೆಲಸ ಮಾಡುವ ಮೂಲಕ ದೇಶದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ವಿವಿಧ ಇಲಾಖೆಗಳು ನಡೆಸುತ್ತಿರುವ ಕಳಪೆ ಕಾಮಗಾರಿ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಸುದ್ದಿಗಳನ್ನು ಬಿತ್ತರಿಸುವ ಮಲಕ ಅಧಿಕಾರಿಗಳನ್ನು ಎಚ್ಚರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಗ್ರಾ.ಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ್, ಕವಿ ಸಮಿತಿಯ ವ್ಯವಸ್ಥಾಪಕ ಶಿವಪ್ರಕಾಶ್ ಸ್ವಾಮಿ ಇನಾಮದಾರ, ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಗ್ರಾ.ಪಂ ಸದಸ್ಯರಾದ ಗುರು ಬಸವರಾಜ ಹಳ್ಳಿಕೇರಿ, ಅನ್ವರ್ ಗಡಾದ, ಪಿಎಸ್ಐ ಪ್ರಹ್ಲಾದ್ ನಾಯಕ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ, ಉಪನ್ಯಾಸಕ ಬಾಳಪ್ಪ, ಎ‌ಸ್.ಎಸ್.ಅಂಗಡಿ, ದೇವಮ್ಮ, ನೀಲಪ್ಪ ಹಕ್ಕಂಡಿ, ಪತ್ರಕರ್ತರಾದ ಸುರೇಶ ಸಂಗರಡ್ಡಿ, ಮಲ್ಲಿಕಾರ್ಜುನ ಪಾಟೀಲ, ಜುನಸಾಬ ವಡ್ಡಟ್ಟಿ, ಬಿ.ಎನ್.ಹೋರಪೇಟಿ ಹಾಗೂ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!