ಹಂಪಿಯಲ್ಲಿ ಪೊಲೀಸ್ ವಿಭಾಗ ಕಚೇರಿ ಸ್ಥಾಪನೆಗೆ ಗಂಗಾವತಿಯ ಶಾಸಕ ಜಿ ಜನಾರ್ಧನ ರೆಡ್ಡಿ ಒತ್ತಾಯ

ಹಂಪಿಯಲ್ಲಿ ಪೊಲೀಸ್ ಉಪ ವಿಭಾಗ ಕಚೇರಿ ಹಾಗೂ ಆನೆಗೊಂದಿಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಸಲ್ಲಿಸಿದ ಗಂಗಾವತಿಯ ಶಾಸಕರಾದ ಜಿ ಜನಾರ್ಧನ ರೆಡ್ಡಿ
GB news kannada ಬೆಂಗಳೂರು : ವಿಧಾನಸೌಧದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಭೇಟಿ ಮಾಡಿ ಹಂಪಿಯಲ್ಲಿ ಪೊಲೀಸ್ ಉಪ ವಿಭಾಗ ಕಚೇರಿ ಹಾಗೂ ಆನೆಗೊಂದಿಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪನೆಗೆ ಮನವಿ ಸಲ್ಲಿಸಿದರು.ಹಂಪಿ ಹಾಗೂ ಆನೆಗೊಂದಿ ವಿಶ್ವವಿಖ್ಯಾತ ಮತ್ತು ಐತಿಹಾಸಿಕ ತಾಣಗಳಾಗಿದ್ದು, ಪ್ರತಿ ವರ್ಷ ದೇಶದಾದ್ಯಂತದ ಸುಮಾರು 40 ಲಕ್ಷ ಪ್ರವಾಸಿಗರೊಂದಿಗೆ, ವಿದೇಶಗಳಿಂದಲೂ 3 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಈ ಕಾರಣದಿಂದಾಗಿ ಇಲ್ಲಿನ ಪ್ರವಾಸಿಗರು ಹಾಗೂ ಸ್ಥಳೀಯ ಜನರ ಸುರಕ್ಷತೆಯನ್ನು ಖಚಿತಪಡಿಸುವ ಅಗತ್ಯತೆಯಿದೆ.
ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ, ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಹಂಪಿಯಲ್ಲಿ ಪೊಲೀಸ್ ಉಪ ವಿಭಾಗ ಕಛೇರಿ ಸ್ಥಾಪಿಸಿದ್ದರು. ಗಸ್ತು ತಿರುಗಲು ಪೊಲೀಸ್ ಸಿಬ್ಬಂದಿಗೆ ದ್ವಿಚಕ್ರವಾಹನಗಳ ವ್ಯವಸ್ಥೆ ಕೂಡಾ ಮಾಡಿದ್ದರು. ಆದರೆ ತದನಂತರ ಬಂದ ಸರ್ಕಾರ ಈ ಪೊಲೀಸ್ ವಿಭಾಗ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದು, ಇದರಿಂದ ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸುರಕ್ಷತೆಗೆ ಭಾರಿ ಹೊಡೆತ ಬಿದ್ದಿದೆ.
ಇತ್ತೀಚೆಗೆ ಹಂಪಿಯಲ್ಲಿ ಇಸ್ರೇಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಒರಿಸ್ಸಾ ವ್ಯಕ್ತಿಯ ಕೊಲೆಯ ಹೀನ ಕೃತ್ಯವು, ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿ ವರ್ಷ 40 ಲಕ್ಷ ದೇಶೀಯ ಮತ್ತು 3 ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸುವ ಹಂಪಿಯನ್ನು ಕೇಂದ್ರವನ್ನಾಗಿ ಇರಿಸಿಕೊಂಡು, ಮತ್ತೆ ಪೊಲೀಸ್ ಉಪ ವಿಭಾಗ ಕಚೇರಿಯನ್ನು ಪುನಃ ಸ್ಥಾಪಿಸಬೇಕು. ಹಾಗೆಯೇ, ಆನೆಗುಂದಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆಯನ್ನು ಮಂಜೂರು ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.ಇದು ಹಂಪಿ ಮತ್ತು ಆನೆಗುಂದಿಗೆ ಆಗಮಿಸುವ ಪ್ರವಾಸಿಗರ ಭದ್ರತೆ ಮತ್ತು ಸ್ಥಳೀಯ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣದ ಅವಶ್ಯಕತೆಯಾಗಿದೆ. ಸರ್ಕಾರವು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಎಚ್. ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕರಾದ ಎನ್.ಟಿ ಶ್ರೀನಿವಾಸ್ ಅವರು ಉಪಸ್ಥಿತರಿದ್ದರು.