ಗಂಗಾವತಿಜಿಲ್ಲಾ ಸುದ್ದಿಗಳು

ಅಂಜನಾದ್ರಿ ಬೆಟ್ಟದಲ್ಲಿ 40 ಅಡಿ ಆಳಕ್ಕೆ ಬಿದ್ದ ಯುವತಿ

ಇತಿಹಾಸ ಪ್ರಸಿದ್ದ ಅಂಜನಾದ್ರಿ ಬೆಟ್ಟ. ಆ ಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಬೆಟ್ಟವನ್ನು ಹತ್ತಿ ಆಂಜನೇಯನ ದರ್ಶನ ಪಡೆಯುತ್ತಾರೆ. ಆದರೆ ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಪೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದೇ ಆಪತ್ತಿಗೆ ಕಾರಣ ಎಂದು ಹೇಳಲಾಗುತ್ತಿದೆ.ಯುವತಿ ಪೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಬಂಡೆಯಿಂದ ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಯುವತಿ ರಾಯಚೂರು ಮೂಲದ ಅಶ್ವಿನಿ ಎಂಬುದು ಗೊತ್ತಾಗಿದೆ.

 

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾ ಎಸ್‌ಪಿ ಡಾ. ರಾಮ್ ಎಲ್ ಅರಸಿದ್ದಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಬೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸದ್ಯ ಅರೆಪ್ರಜ್ಞಾವಸ್ಥೆಯಲ್ಲಿರುವ ಯುವತಿಗೆ ಚಿಕಿತ್ಸೆ ಮುಂದುವರಿದಿದೆ. ಗುಣಮುಖವಾದ ನಂತರ ಘಟನೆಗೆ ನಿಖರ ಕಾರಣ ಏನು ಎಂಬದು ತಿಳಿಯಲಿದೆ.

ಹನುಮಂತನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ. 525 ಮೆಟ್ಟಿಲುಗಳನ್ನು ಹತ್ತಿ, ಬೆಟ್ಟದ ಮೇಲಿರುವ ಆಂಜನೇಯನ ದರ್ಶನ ಪಡೆದು ಪುನೀತರಾಗುತ್ತಾರೆ. ಬೆಟ್ಟದ ಹಿಂಬಾಗದಲ್ಲಿರುವ ಬಂಡೆಗಲ್ಲಿನ ಮೇಲೆ ನಿಂತು ಕೆಲವರು ಸೆಲ್ಪಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದೇ ರೀತಿ ಆಂಜನೇಯನ ದರ್ಶನ ಪಡೆಯುಲು ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದಿಂದ ಇಳಿಯುವ ಮೊದಲೇ ಆಪತ್ತಿಗೆ ಸಿಲುಕಿದ್ದಾಳೆ. ಬೆಟ್ಟದ ಮೇಲಿರುವ ಬಂಡೆಗಲಿನ ಮೇಲಿಂದ 30 ರಿಂದ 40 ಅಡಿ ಕೆಳಗೆ ಬಿದ್ದಿದ್ದಾಳೆ. ಕೆಳಕ್ಕೆ ಬೀಳುತ್ತಿದ್ದಂತೆ ಜೋರಾಗಿ ಕಿರುಚಾಡಿದ್ದಾಳೆ. ಸದ್ದು ಕೇಳಿದ ಭಕ್ತರು ದೇವಸ್ಥಾನದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

ದುರ್ಗಮವಾಗಿರುವ ಬೆಟ್ಟದಲ್ಲಿ ಇಳಿದು ದೇವಾಲಯದ ಸಿಬ್ಬಂದಿ ಯುವತಿ ಬಳಿ ಹೋಗಿದ್ದಾರೆ. ಆಕೆ ಜೀವಂತ ಇದ್ದಿದ್ದರಿಂದ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಾಯಿತು. ಸರಿಸುಮಾರು ಎರಡು ಗಂಟೆ ಕಾರ್ಯಾಚರಣೆ ಬಳಿಕ ಬೆಟ್ಟದಿಂದ ಯುವತಿಯನ್ನು ಹೊರಗೆ ತರಲಾಯಿತು. ಮೊದಲಿಗೆ ಗಂಗಾವತಿ ತಾಲೂಕು ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button