ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಸಕ ಗಾಲಿ ಜನಾರ್ಧನ ರೆಡ್ಡಿಗೆ ಮನವಿ*
*ವಡ್ಡರಹಟ್ಟಿ ಕೆಎಸ್ ಆರ್ ಟಿಸಿ ಸ್ಟೇಜ್ ಮಾಡಲು ಆಗ್ರಹ, ಆರೋಗ್ಯ ಕೇಂದ್ರ ಮಂಜೂರಿಗೆ ವಡ್ಡರಹಟ್ಟಿ ನಾಗರಿಕ ಸಮಿತಿ ಮನವಿ*
*ದೂರವಾಣಿ ಮೂಲಕ ಅಧಿಕಾರಿಗಳ ತರಾಟೆ ತೆಗೆದುಕೊಂಡ ಶಾಸಕ*
*ಗಂಗಾವತಿ* : ತಾಲೂಕಿನ ವಡ್ಡರಹಟ್ಟಿ ಗ್ರಾಮದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಡ್ಡರಹಟ್ಟಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಗ್ರಾಮದ ಮುಖಂಡರು ಹಾಗೂ ವಡ್ಡರಹಟ್ಟಿ ನಾಗರಿಕ ಸಮಿತಿ ಅವರು ಶನಿವಾರ ಸಲ್ಲಿಸಿದ ಮನವಿಗೆ, ಸಕಾರಾತ್ಮವಾಗಿ ಸ್ಪಂದಿಸಿದ ಶಾಸಕರು ಸ್ಥಳದಲ್ಲೇ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತರಾಟೆ ತೆಗೆದುಕೊಂಡರು.
ಬಸ್ ಸಮಸ್ಯೆಯಿಂದ ಗ್ರಾಮದ ಪ್ರಯಾಣಿಕರು, ವಿದ್ಯಾರ್ಥಿಗಳು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. 10 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ವಡ್ಡರಹಟ್ಟಿ ಗ್ರಾಮಕ್ಕೆ ಕೊಪ್ಪಳ ವಿಭಾಗದ ಕೆಎಸ್ ಆರ್ ಟಿಸಿ ಎಲ್ಲ ಘಟಕಗಳು ಹಾಗೂ ರಾಯಚೂರು, ಸಿಂಧನೂರು ಈಶಾನ್ಯ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಗಳು ನಿಲುಗಡೆಗೆ ವಡ್ಡರಹಟ್ಟಿ ಗ್ರಾಮವನ್ನು ಕೆಎಸ್ ಆರ್ ಟಿಸಿ ಸ್ಟೇಜ್ ಮಾಡಬೇಕು. ಗಂಗಾವತಿ-ಕೊಪ್ಪಳ ಮುಖ್ಯರಸ್ತೆಯಲ್ಲಿ ವಿದ್ಯುತ್ ದೀಪಗಳು ಇಲ್ಲದ್ದರಿಂದ ಅಪಘಾತಗಳು ಹೆಚ್ಚುತ್ತಿದ್ದು, ಡಿವೈಡರ್ ಅಳವಡಿಸಿ ವಡ್ಡರಹಟ್ಟಿ ಕ್ಯಾಂಪ್ ಮುಖ್ಯರಸ್ತೆಯಿಂದ ವಿಶಾಲ್ ಮಾರ್ಟ್ ವರೆಗೆ ರಸ್ತೆಯ ಎರಡು ಬದಿ ವಿದ್ಯುತ್ ದೀಪಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ವಡ್ಡರಹಟ್ಟಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿದ್ದರಿಂದ ಧೂಳು ಹೆಚ್ಚಿದ್ದು, ಪ್ರತಿ 15 ದಿನಕ್ಕೊಮ್ಮೆ ಹೇಮಗುಡ್ಡ ಟೋಲ್ ಅವರು ರಸ್ತೆ ಸ್ವಚ್ಛಗೊಳಿಸಬೇಕು. ಕಳೆದ 7 ತಿಂಗಳಿಂದ ರಸ್ತೆ ಸ್ವಚ್ಛತಾ ಕಾರ್ಯ ನಡೆದಿಲ್ಲ. ವಡ್ಡರಹಟ್ಟಿ ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೂ, ಆರೋಗ್ಯ ಸೌಲಭ್ಯಗಳು ಇಲ್ಲ. ಕೂಲಿಕಾರ್ಮಿಕರ ಕುಟುಂಬಗಳು, ರೈತಾಪಿ ವರ್ಗ ಹೆಚ್ಚಿದ್ದು, ಗ್ರಾಮಕ್ಕೆ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಿ ಆರೋಗ್ಯ ಸೌಲಭ್ಯ ಒದಗಿಸಲು ಕ್ರಮವಹಿಸಬೇಕು. ವಡ್ಡರಹಟ್ಟಿ ಕ್ಯಾಂಪ್ ನಲ್ಲಿರುವ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿ ಪಡಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು. ಗ್ರಾಮದ ಕಸ ವಿಲೇವಾರಿಗೆ ತಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಶಾಸಕರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
*ನಗರಸಭೆ ಸೇರ್ಪಡೆಗೆ ವಿರೋಧ* : ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ರೈತಾಪಿ ವರ್ಗ ಹಾಗೂ ಹೆಚ್ಚು ಕೂಲಿಕಾರರನ್ನು ಹೊಂದಿದೆ. ವಡ್ಡರಹಟ್ಟಿ ಗ್ರಾಮ ಪಂಚಾಯತ್ ಯನ್ನು ನಗರಸಭೆಗೆ ಸೇರ್ಪಡೆ ಮಾಡಿದರೆ ಸರಕಾರದಿಂದ ದೊರೆಯುವ ಗ್ರಾಮೀಣ ಭಾಗದ ಸೌಲಭ್ಯಗಳು ಕೈತಪ್ಪಲಿವೆ. ಉದ್ಯೋಗ ಖಾತರಿ ಯೋಜನೆಯಿಂದ ಹಲವಾರು ಕೂಲಿಕಾರ್ಮಿಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಜೊತೆಗೆ
ಗ್ರಾಮೀಣ ಭಾಗದ ಶೈಕ್ಷಣಿಕ ಸೌಲಭ್ಯವು ನಮಗೆ ತಪ್ಪಲಿದೆ. ವಡ್ಡರಹಟ್ಟಿಯನ್ನು ಯಾವುದೇ ಕಾರಣಕ್ಕೂ ನಗರಸಭೆಗೆ
ಸೇರ್ಪಡೆ ಮಾಡಕೂಡದು ಎಂದು ಗ್ರಾಮದ ಮುಖಂಡರು ಮನವಿ ಮಾಡಿದರು.
*ಅಧಿಕಾರಿಗಳು ತರಾಟೆಗೆ:* ಗ್ರಾಮದ ಮುಖಂಡರು ಹಾಗೂ ವಡ್ಡರಹಟ್ಟಿ ನಾಗರಿಕ ಸಮಿತಿ ಅವರ ಮನವಿ ಸ್ವೀಕರಿಸಿದ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು, ಸ್ಥಳದಲ್ಲೇ ಮೊದಲು ಕೆಎಸ್ ಆರ್ ಟಿಸಿ ತಾಲೂಕು ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ವಡ್ಡರಹಟ್ಟಿ ಗ್ರಾಮಸ್ಥರ ಹಲವು ದಿನಗಳ ಬೇಡಿಕೆಯಾದ ಬಸ್ ಸಮಸ್ಯೆಗೆ ವಡ್ಡರಹಟ್ಟಿಯನ್ನು ಸ್ಟೇಜ್ ಮಾಡುವಂತೆ ಸೂಚಿಸಿ, 15 ದಿನಗಳ ಗಡುವು ನೀಡಿದರು. ನಂತರ ಟೋಲ್ ವ್ಯವಸ್ಥಾಪಕರಿಗೆ ದೂರವಾಣಿ ಕರೆ ರಸ್ತೆ ಸ್ವಚ್ಛತೆಗೆ ಕ್ರಮವಹಿಸುವಂತೆ ತರಾಟೆಗೆ ತೆಗೆದುಕೊಂಡರು. ವಡ್ಡರಹಟ್ಟಿ ದೊಡ್ಡ ಗ್ರಾಮವಾಗಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಕೇಂದ್ರ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮದ ತಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ವಡ್ಡರಹಟ್ಟಿ ಗ್ರಾಮದ ಹಿರಿಯ ಮುಖಂಡರು ಹಾಗೂ ವಡ್ಡರಹಟ್ಟಿ ನಾಗರಿಕ ಸಮಿತಿ ಸಂಚಾಲಕರು, ಸದಸ್ಯರು ಇದ್ದರು.