ಗ್ಯಾರಂಟಿ ಅನುಷ್ಟಾನ ತಾಲೂಕು ಸಮಿತಿ ನೇಮಕ.. ವೆಂಕಟೇಶಬಾಬುಗೆ ತಾಲೂಕು ಅಧ್ಯಕ್ಷ ಜವಬ್ದಾರಿ- ಇಕ್ಬಾಲ್ ಅನ್ಸಾರಿ ಬೆಂಬಲಿಗರಿಗೆ ಹೆಚ್ಚು ಮನ್ನಣೆ
ಗಂಗಾವತಿ.
ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮಾಣಿಕವಾಗಿ ಅನುಷ್ಟಾನಗೊಳಿಸುವುದು ಮತ್ತು ಫಲಾನುಭವಿಗಳಿಗೆ ಸರಕಾರದ ಯೋಜನೆ ತಲುಪಿಸುವಲ್ಲಿ ವಿಶೆಷ ಆಸಕ್ತಿವಹಿಸಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗೆ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಿದೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲಾ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಜಿಲ್ಲಾಧಿಕಾರಿಗಳು ಗಂಗಾವತಿ ತಾಲೂಕಿನ ಸಮಿತಿ ನೇಮಕ ಮಾಡಿ ಆದೇಶ ಮಾಡಿದ್ದು, ಈ ಸಮಿತಿಗೆ ಆನೆಗೊಂದಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಇಕ್ಬಾಲ್ ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತ ವೆಂಕಟೇಶಬಾಬು ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಿಪಾರಸ್ಸಿನಂತೆ ಈ ತಾಲೂಕು ಸಮಿತಿ ನೇಮಕವಾಗಿದ್ದು, ವಿಶೇಷವಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರಿಗೆ ಹೆಚ್ಚು ಮನ್ನಣೆ ನೀಡಲಾಗಿದೆ.
ಶನಿವಾರ ಜಿಲ್ಲಾಧಿಕಾರಿಗಳ ಆದೇಶವನ್ನು ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮತ್ತು ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ತಾಲೂಕು ಅಧ್ಯಕ್ಷರು ಮತ್ತು ಸದಸ್ಯರಿಗೆ ನೇಮಕಾತಿ ಆದೇಶದ ಪ್ರತಿ ನೀಡಿದರು. ಈ ಸಮಿತಿಯಲ್ಲಿ ಬಸವನದುರ್ಗಾ ಗ್ರಾಮದ ಗ್ರಾಪಂ ಸದಸ್ಯ ವೆಂಕಟೇಶಬಾಬು ಅಧ್ಯಕ್ಷರಾಗಿದ್ದು, ಗಂಗಾವತಿ ನಗರದ ೩೨ನೇ ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತ ಪರಶುರಾಮ ಕಿರಿ ಕಿರಿ, ೩೪ನೇ ವಾರ್ಡ್‌ನ ಪ್ರಜ್ವಲ್, ೭ನೇ ವಾರ್ಡ್‌ನ ದಾವಲ್, ೧ನೇ ವಾರ್ಡ್‌ನ ಮಂಜುನಾಥ ಕಲಾಲ್, ೨೫ನೇ ವಾರ್ಡ್‌ನ ಸನ್ನಿಕ್, ೧೩ನೇ ವಾರ್ಡ್‌ನ ಹಮೀದ್ ಮುಲ್ಲಾ, ೧ನೇ ವಾರ್ಡ್‌ನ ಅಹ್ಮದ್ ಪಟೇಲ್, ಗಂಗಾವತಿ ತಾಲೂಕಿನ ಭಟ್ಟರ್ ನರಸಾಪುರ ಗ್ರಾಮದ ಮುಸ್ತಾಕ್, ಹೊಸಕೇರಿ ಗ್ರಾಮದ ಓಂಕಾರೇಪ್ಪ, ನಾಗೇಶನಹಳ್ಳಿಯ ವಿರೇಶ ಸೇರಿದಂತೆ ಹತ್ತು ಜನರನ್ನು ಸದಸ್ಯರನ್ನಾಗಿ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಟಿಪ್ಪಣಿ ಆದೇಶದಂತೆ ಈ ತಾಲೂಕು ಸಮಿತಿ ನೇಮಕ ಮಾಡಿರುವ ಜಿಲ್ಲಾಧಿಕಾರಿಗಳು ಸರಕಾರದ ಗ್ಯಾರಂಟಿ ಯೋಜನೆಗಳಾಗಿರುವ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳ ಅನುಷ್ಟಾನದ ಮೇಲ್ವಿಚಾರಣೆ ಮಾಡುವುದು ಮತ್ತು ಪ್ರತಿಯೊಬ್ಬ ಫಲಾನುಭವಿಗಳಿಗೂ ಈ ಯೋಜನೆ ತಲುಪಿಸುವಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ವೆಂಕಟೇಶಬಾಬು ಸೇರಿದಂತೆ ಸಮಿತಿ ಸದಸ್ಯರು ನೇಮಕಾತಿ ಆದೇಶ ಪ್ರತಿ ಪಡೆದುಕೊಂಡರು. ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ ಮತ್ತಿತರು ಇದ್ದರು.
ಸರಕಾರದ ಗ್ಯಾರಂಟಿ ಯೋಜನೆ ಅನುಷ್ಟಾನದ ತಾಲೂಕು ಸಮಿತಿಯಲ್ಲಿ ಅಧ್ಯಕ್ಷರನ್ನು ಸೇರಿ ಬಹುತೇಕ ಸದಸ್ಯರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರಾಗಿರುವುದು ವಿಶೆಷವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ರಾಜ್ಯ ಸರಕಾರ ಗಂಗಾವತಿ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿಗೆ ಹೆಚ್ಚು ಮನ್ನಣೆ ನೀಡಿರುವುದು ಈ ಸಮಿತಿ ನೇಮಕದಿಂದ ಸಾಬೀತಾಗಿದ್ದು, ಅನ್ಸಾರಿ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಕ್ಸ್:
ಗ್ಯಾರಂಟಿ ಯೋಜನೆಗೆ ನೇಮಕ ಹರ್ಷ
ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಯ ತಾಲೂಕು ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅತ್ಯಂತ ಸಂತೋಷವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಪಕ್ಷದ ಮುಖಂಡರು ನಮಗೆ ಈ ಜವಬ್ದಾರಿ ನೀಡಿದ್ದರಿಂದ ಅವರಿಗೆ ಅಭಿನಂದಿಸುತ್ತೇನೆ. ಸರಕಾರ ಮತ್ತು ಪಕ್ಷದ ಮುಖಂಡರು ನೀಡಿರುವ ಈ ಜವಬ್ದಾರಿಯನ್ನು ನಾನು ಮತ್ತು ಸಮಿತಿಯ ಎಲ್ಲಾ ಸದಸ್ಯರು ಪ್ರಮಾಣಿಕವಾಗಿ ನಿರ್ವಹಿಸುತ್ತೇವೆ.
ವೆಂಕಟೇಶಬಾಬು, ತಾಲೂಕು ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಸಮಿತಿ, ಗಂಗಾವತಿ.