ಕೃಷ್ಣೇಗೌಡ ಹೇಳಿಕೆಗೆ ರಾಜೇಶರೆಡ್ಡಿ ತಿರುಗೇಟು.. ಹಣ ವಸೂಲಿ ಆಧಾರ ಸಹೀತ ಸಾಬೀತುಪಡಿಸಲಿ
ಗಂಗಾವತಿ.
ನಾನು ಸಾರ್ವಜನಿಕರಿಂದ ಮತ್ತು ಅಧಿಕಾರಿಗಳಿಂದ ಕೋಟಿಗಟ್ಟಲೆ ಹಣ ವಸೂಲಿ ಮಾಡಿದ್ದೇನೆ ಎಂದು ಹೇಳಿಕೆ ನೀಡಿರುವ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಆಧಾರ ಸಹೀತವಾಗಿ ಸಾಬೀತು ಮಾಡಬೇಕು. ತಾನು ಕೃಷ್ಣಪ್ಪ ಅಲಿಯಾಸ್ ಕೃಷ್ಣೇಗೌಡ ಎಂದು ಎರಡೇರಡು ಹೆಸರಿನಿಂದ ಗುರುತಿಸಿಕೊಂಡು ನನ್ನ ಹೆಸರಿನ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜೇಶರೆಡ್ಡಿ ಹೇಳಿದರು.
ಕಳೆದ ದಿನ ಗಂಗಾವತಿ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಟಿಯಲ್ಲಿ ರಾಜೇಶರೆಡ್ಡಿ ಸಂಘಟನೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ರಾಜೇಶರೆಡ್ಡಿ ಕೃಷ್ಣೇಗೌಡ ಅವರು ಕರವೇ ಸಂಘಟನೆ ಹೆಸರಿನಲ್ಲಿ ಎನೇನು ಮಾಡುತ್ತಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಗಂಗಾವತಿಗೆ ಸಂಘಟನೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಬಂದಿರುವ ಕೃಷ್ಣೇಗೌಡ ಅವರು ಗಂಗಾವತಿ ಜನತೆಯ ನೀಡುವ ಗೌರವವನ್ನು ಪಡೆದುಕೊಂಡು ಹೋಗಬೇಕು. ಆದರೆ ಅವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ತಮ್ಮ ಮಾನ ಮರ್ಯಾದೆಯನ್ನೇ ಕಳೆದುಕೊಳ್ಳುವ ಕೆಲಸ ಮಾಡಿದ್ದಾರೆ. ನಾನು ಕೃಷ್ಣೇಗೌಡ ಅವರ ಕರವೇ ಸ್ವಾಭಿಮಾನಿ ಬಣದಲ್ಲಿ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷನಾಗಿ ಸಂಘಟನೆಯನ್ನು ಬಲಪಡಿಸಿದ್ದೇನೆ. ನನ್ನ ನೇತೃತ್ವದಲ್ಲಿ ಈ ಭಾಗದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದ್ದೇನೆ. ತುಂಗಭದ್ರಾ ಜಲಾಶಯ ಹೂಳೆತ್ತುವುದು, ಆನೆಗೊಂದಿ ಉತ್ಸವ ಆಚರಣೆಗೆ ಒತ್ತಾಯಿಸಿ ನಾನು ಹೋರಾಟ ನಡೆಸಿದ್ದೇನೆ. ಮತ್ತು ಕುಷ್ಟಗಿಯ ಸಣ್ಣ ನೀರಾವರಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ನಾನು ಬಯಲು ಮಾಡಿದ್ದೇನೆ. ಆದರೆ ತಾವು ಇದನ್ನೆಲ್ಲ ಮಾಡಿದ್ದೇನೆ ಎಂದು ಹೇಳಿಕೊಂಡಿರುವುದು ಅವರಲ್ಲಿ ಎಂತಹ ಸಣ್ಣ ವ್ಯಕ್ತಿತ್ವ ಇದೆ ಎಂಬುದು ಬಹಿರಂಗ ಮಾಡಿಕೊಂಡಿದ್ದಾರೆ. ನಾನು ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ಬಗ್ಗೆ ಎಸ್‌ಪಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿಕೆ ನೀಡಿರುವ ಕೃಷ್ಣೇಗೌಡ ಅವರು ಹಣ ವಸೂಲಿ ಮಾಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಅಥವಾ ಹಣ ಕೊಟ್ಟವರಿಂದ ಹೇಳಿಕೆ ಬಿಡುವ ಕೆಲಸ ಮಾಡಲಿ. ಇಲ್ಲಿಗೆ ಬಂದು ಸುಳ್ಳು ಆರೋಪ ಮಾಡಿದರೆ ಜನ ನಂಬುವುದಿಲ್ಲ. ೨೦೧೫-೧೬ರಲ್ಲೇ ನಾನು ಕರವೇ ಸ್ವಾಭಿಮಾನಿ ಬಣದಿಂದ ಹೊರಗೆ ಬಂದು ಪ್ರತ್ಯೇಕವಾಗಿ ಸ್ವಾಭಿಮಾನಿ ಕರವೇ ಎಂಬ ಹೆಸರಿನಲ್ಲಿ ಕನ್ನಡ ಸಂಘಟನೆಯನ್ನು ಹುಟ್ಟು ಹಾಕಿ ಹೋರಾಟ ಮತ್ತು ಜನಪರ ಕಾರ್ಯಕ್ರಮ ಮಾಡಿದ್ದೇನೆ. ನಾನು ಅವರ ಸಂಘಟನೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಕೃಷ್ಣೇಗೌಡ ಅವರು ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇನೆ ಒಂದು ಲಾರಿ ಅಕ್ಕಿ ಕಳಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಒಪ್ಪದ ಕಾರಣ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರಾಜೇಶರೆಡ್ಡಿ ಗುಡುಗಿದರು.
ಮುಂದುವರೆದು ಮಾತನಾಡಿದ ಅವರು ಶಾಸಕ ಗಾಲಿ ಜನಾರ್ಧನರೆಡ್ಡಿ ಅವರೊಂದಿಗೆ ನಾನು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಜೋತು ಬಿದ್ದಿವೆ ಎಂದು ಹೇಳಿಕೆ ನೀಡುವ ಕೃಷ್ಣೇಗೌಡ ಮೊದಲು ತಾವು ಯಾರೊಂದಿಗೆ ಜೋತು ಬಿದ್ದಿರುವ ಬಗ್ಗೆ ನೆನಪು ಮಾಡಿಕೊಳ್ಳಬೇಕು. ಜನಾರ್ಧನರೆಡ್ಡಿ ಅವರು ಜನರ ಮತಗಳಿಂದ ಆಯ್ಕೆಯಾಗಿ ಶಾಸಕರಾಗಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳಿಗೆ ನಾವು ಕೈ ಜೋಡಿಸುತ್ತಿದ್ದೇವೆ. ಮತ್ತು ನಾವು ಜನಪ್ರತಿನಿಧಿಗಳೊಂದಿಗೆ ಗುರುತಿಸಿಕೊಳ್ಳುವುದು ವೈಯಕ್ತಿ ವಿಚಾರವಾಗಿದೆ. ಇದರ ಬಗ್ಗೆ ಕೇಳಲು ಅವರಿಗೆ ಯಾವ ಹಕ್ಕಿದೆ. ತಮ್ಮ ಸಂಘಟನೆ ಕೆಲ ಪದಾಧಿಕಾರಿಗಳು ಕೂಡಾ ಜನಾರ್ಧನರೆಡ್ಡಿ ಪಕ್ಷದಲ್ಲಿ ಗುರುತಿಕೊಂಡಿದ್ದಾರೆ. ಅವರನ್ನೇ ತಮ್ಮ ಪಕ್ಕ ಇಟ್ಟುಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡುವ ಕೃಷ್ಣೇಗೌಡ ಮೊದಲು ತಾವು ಆತ್ಮವಾಲೋಕನ ಮಾಡಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡಬೇಕು. ತಮ್ಮ ಕರವೇ ಸ್ವಾಭಿಮಾನಿದ ಬಣದಿಂದ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿರುವ ಕೃಷ್ಣೇಗೌಡ ಅವರು ಶಾಲೆಗಳ ಹೆಸರು ಬಹಿರಂಗಪಡಿಸಬೇಕು. ಬಾಯಿಗೆ ಬಂದ ಸುಳ್ಳು ಹೇಳಿದರೆ ನಂಬುವ ಮನಸ್ಥಿತಿಯ ಜನ ಗಂಗಾವತಿಯಲ್ಲಿ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಅಮಾಯಕ ಯುವಕರನ್ನು ಸೇಳೆದುಕೊಂಡು ಸಂಘಟನೆ ಪದಾಧಿಕಾರಿಗಳನ್ನು ಘೋಷಣೆ ಮಾಡಿ ಹಣ ಎತ್ತುವಳಿ ಮಾಡುವ ರೂಢಿ ಕೃಷ್ಣೇಗೌಡರಿಗೆ ಇದೆ. ಈ ಕಾರಣಕ್ಕೆ ನಾನು ಅವರಿಂದ ಹೊರಗೆ ಬಂದು ಪ್ರತ್ಯೇಕ ಸಂಘಟನೆ ಕಟ್ಟಿಕೊಂಡಿದ್ದೇನೆ. ಹಿಂದೆ ತಾವು ಕೃಷ್ಣಪ್ಪ ಆಗಿದ್ದು, ಈಗ ಅಲಿಯಾಸ್ ಕೃಷ್ಣೇಗೌಡ ಆಗಿದ್ದಾರೆ. ಆದರೆ ನನ್ನ ಹೆಸರು ಬದಲಾವಣೆಗೆ ಮಾತ್ರ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ತಾವು ಕೂಡಾ ಹಿಂದೆ ಕರವೇ ಸಂಘಟನೆಯಲ್ಲಿ ಇದ್ದು ನಂತರ ಪ್ರತ್ಯೇಕವಾಗಿ ಬಣ ಮಾಡಿಕೊಂಡಿರುವುದನ್ನು ಮರೆತಿದ್ದಾರೆ. ತಾವು ಮಾತ್ರ ಸಾಚಾ ಇನ್ನೊಂದು ಕನ್ನಡಪರ ಸಂಘಟನೆಗಳವರು ಮೋಸ ಮಾಡುವರು, ಸಂಘಟನೆ ದುರ್ಬಳಕೆ ಮಾಡಿಕೊಂಡವರು ಎಂದು ಹೇಳಿರುವ ಕೃಷ್ಣೇಗೌಡ ಎಂತವರು ಎಂಬುದು ಎಲ್ಲ ಕನ್ನಡಪರ ಸಂಘಟನೆಗಳವರಿಗೂ ಗೊತ್ತಿದೆ. ನಿಮ್ಮ ಸಂಘಟನೆಗಾಗಿ ನೀವು ಕೆಲಸ ಮಾಡಿ. ನಮ್ಮ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಮಾಡಬೇಡಿ ಎಂದು ರಾಜೇಶರೆಡ್ಡಿ ಕೃಷ್ಣೇಗೌಡ ವಿರುದ್ಧ ಗುಡುಗಿದರು.
ಬಾಕ್ಸ್:
ಕೃಷ್ಣೇಗೌಡ ಹೇಳಿಕೆ ಆಧಾರರಹಿತ
ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಅವರು ಗಂಗಾವತಿಗೆ ತಮ್ಮ ಸಂಘಟನೆ ಪದಾಧಿಕಾರಿಗಳ ಪದಗ್ರಹಣಕ್ಕೆ ಬಂದು ಇನ್ನೊಬ್ಬರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ನನ್ನ ಬಗ್ಗೆ ಅವರು ನೀಡಿರುವ ಹೇಳಿಕೆ ಆಧಾರ ರಹಿತವಾಗಿದೆ. ನಾನು ಹಣ ವಸೂಲಿ ಮಾಡಿದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲಿ. ಅಥವಾ ನನಗೆ ಹಣ ಕೊಟ್ಟವರಿಂದಲಾದರೂ ಹೇಳಿಕೆ ಬಿಡುಗಡೆ ಮಾಡಿಸಲಿ. ನನ್ನ ಹೆಸರು ಬದಲಾವಣೆ ಬಗ್ಗೆ ಮಾತನಾಡುವ ಅವರು ಕೃಷ್ಣಪ್ಪ ಅಲಿಯಾಸ್ ಕೃಷ್ಣೇಗೌಡ ಎಂಬುದನ್ನು ಮರೆತಿದ್ದಾರೆ.
ರಾಜೇಶರೆಡ್ಡಿ, ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಕರವೇ ಸಂಘಟನೆ