ಬ್ಯಾನರ್‌ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ..!! ಶಾಸಕ ಜನಾರ್ಧನರೆಡ್ಡಿ ಚಿತ್ತ ಬಿಜೆಪಿಯತ್ತ..? ಕ್ಷೇತ್ರದಲ್ಲಿ ಜನರಲ್ಲಿ ಹುಟ್ಟು ಹಾಕಿದ ಚರ್ಚೆ
ಗಂಗಾವತಿ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮದೇ ಆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಕೊಪ್ಪಳ ಲೋಸಭೆ ಕ್ಷೇತ್ರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದ ಶಾಸಕ ಗಾಲಿ ಜನಾರ್ಧನರೆಡ್ಡಿ ಅಯೋಧ್ಯೆಯ ಶ್ರೀ ರಾಮಮಂದಿರ ಉದ್ಘಾಟನೆಯ ಶುಭಾಷಯ ಕೊರುವ ಬ್ಯಾನರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರ ಹಾಕಿ ಕ್ಷೇತ್ರದ ಜನರಲ್ಲಿ ಚರ್ಚೆ ಹುಟ್ಟು ಹಾಕಿದ್ದಾರಲ್ಲದೇ ತಮ್ಮ ಕೆಆರ್‌ಪಿಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮತ್ತು ಜನಾರ್ಧನರೆಡ್ಡಿ ಚಿತ್ತ ಬಿಜೆಪಿಯತ್ತ ಎಂಬ ಅನುಮಾನ ಹುಟ್ಟು ಹಾಕಿದ್ದಾರೆ.
ಕಳೆದ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಶುಭ ಕೊರುವ ಬ್ಯಾನರ್‌ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರದೊಂದಿಗೆ ಎಲ್ಲ ಕಡೆಗಳಲ್ಲಿ ಹಾಕಿರುವುದು ಆಶ್ಚರ್ಯ ಮೂಡಿಸಿದೆ. ವಾರಕ್ಕೊಮ್ಮೆ ಕ್ಷೇತ್ರಕ್ಕೆ ಬರುವ ಶಾಸಕ ಜನಾರ್ಧನರೆಡ್ಡಿ ಅವರು ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಮುಂಚೆ ಬಿಜೆಪಿಯಲ್ಲಿದ್ದ ಜನಾರ್ಧನರೆಡ್ಡಿ ಸ್ವಂತ ಪಕ್ಷವನ್ನು ಪ್ರಾರಂಭಿಸಿ ಗಂಗಾವತಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಪ್ರಾರಂಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಹಾಡಿ ಹೊಗಳುತ್ತಿದ್ದ ಅವರು ದಿಡೀರ್ ತೆಗಳಲು ಶುರು ಮಾಡುತ್ತಾರೆ. ಅದೇ ಬಿಜೆಪಿ ನಾಯಕರ ವಿರುದ್ಧ ಹರಿ ಹಾಯುತ್ತಾ ಕೇಂದ್ರ ಸರಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಹೇಳಿ ಆಶ್ಚರ್ಯ ಮೂಡಿಸುತ್ತಾರೆ. ತಮ್ಮ ಜನ್ಮ ದಿನದಂದು ಕೆಆರ್‌ಪಿಪಿ ಪಕ್ಷದಿಂದ ಲೋಕಸಭೆಯಲ್ಲಿ ಅಭ್ಯರ್ಥಿಗಳನ್ನು ಹಾಕಿ ಬಿಜೆಪಿ ಕಾಂಗ್ರೆಸ್‌ಗೆ ಶಕ್ತಿ ತೋರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ತಮ್ಮದೇ ಪಕ್ಷದಲ್ಲಿ ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳಿದ್ದರೂ ಬ್ಯಾನರ್‌ನಲ್ಲಿ ಒಮ್ಮೆಯೂ ಅವರ ಫೊಟೋ ಹಾಕದ ಜನಾರ್ಧನರೆಡ್ಡಿ ದಿಡೀರ್ ಮೋದಿ ಫೊಟೋ ಹಾಕಿ ಬಿಜೆಪಿ ಮತ್ತು ಕೆಆರ್‌ಪಿಪಿ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಮೋದಿ ಫೊಟೋ ಬಳಸಿರುವುದರಿಂದ ರೆಡ್ಡಿ ಅವರು ಬಿಜೆಪಿಯೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಮತದಾರರಷ್ಟೆ ಅಲ್ಲ ಬಿಜೆಪಿ ಕೆಆರ್‌ಪಿಪಿ ಕಾರ್ಯಕರ್ತರೇ ಜೋರಾಗಿ ಚರ್ಚಿಸುತ್ತಿದ್ದಾರೆ. ಮತ್ತು ಮುಂದಿನ ದಿನಗಳಲ್ಲಿ ಜನಾರ್ಧನರೆಡ್ಡಿ ನಡೆ ಯಾವ ಕಡೆ ಎಂಬ ಅನುಮಾನ ಹುಟ್ಟು ಹಾಕಿದ್ದಾರೆ.
ಗುರುವಾರ ಮಾಜಿ ಮುಖ್ಯಮಂತ್ರಿ ಜಗದೀಶಶೆಟ್ಟರ್ ಅವರು ದಿಡೀರ್ ದೆಹಲಿಗೆ ತೆರಳಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿ ಕರ್ನಾಟಕ ಕಾಂಗ್ರೆಸ್ ಶಾಖ್ ನೀಡಿದ್ದಾರೆ. ಜಗದೀಶಶೆಟ್ಟರ್ ಅವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಇತ್ತ ಶಾಸಕ ಜನಾರ್ಧನರೆಡ್ಡಿ ಕೂಡಾ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಶೀಘ್ರ ಜನಾರ್ಧನರೆಡ್ಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬು ಗುಸು ಗುಸು ಶುರುವಾಗಿದೆ. ಇದಕ್ಕೆ ಜನಾರ್ಧನರೆಡ್ಡಿ ಸ್ಪಷ್ಟನೆ ನೀಡಬೇಕಿದೆ. ಅಥವಾ ಮುಂದೆ ನಡೆಯುವ ರಾಜಕೀಯ ಬೆಳವಣಿಗೆ ಕಾದು ನೋಡಬೇಕಿದೆ.