ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವ ಗೆದ್ದಂತೆ- ಡಾ.ಬಸವರಾಜ
ಕೊಪ್ಪಳ: ಮತದಾರರು ಬಿಜೆಪಿ ಪರ ಒಲವು ತೋರಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ದೇಶದಲ್ಲಿ ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವ ಗೆದ್ದಂತೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ. ಶರಣಪ್ಪ ಹೇಳಿದರು.
ಕುಷ್ಟಗಿ ಪಟ್ಟಣದ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿ ಮಾತನಾಡಿದ ಅವರು, ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ. ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿ ಎಂದರು.
ಬಡವರು, ಮಹಿಳೆಯರು, ರೈತರು ಹಾಗೂ ಯುವಜನತೆ ಶ್ರೆಯೋಭಿವೃದ್ಧಿ ಆಶಯ ಇಟ್ಟುಕೊಂಡು ಬಿಜೆಪಿ ಈ ಬಾರಿ ಕಣದಲ್ಲಿದೆ. ಮೋದಿ ಗ್ಯಾರೆಂಟಿಯಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಲಿದೆ. ಪ್ರಜಾಪ್ರಭುತ್ವ ಉಳಿವಿಗಾಗಿ ಬಿಜೆಪಿಗೆ ಮತ ಹಾಕಿ. ಕೊಪ್ಪಳ ಲೋಕಸಭಾ ಕ್ಷೇತ್ರದವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಕೆಲ ಚಿಂತನೆ ಇಟ್ಟುಕೊಂಡು ಚುನಾವಣೆ ಯಲ್ಲಿ ಧುಮಿಕಿದ್ದೇನೆ. ಜನತೆ ಮನೆ ಮಗನಾದ ನನಗೆ ಮತ ನೀಡಿ ಅಭೂತಪೂರ್ವ ಗೆಲುವು ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಕೆ.ಶರಣಪ್ಪ ಮಾತನಾಡಿ, ಮತದಾನ ಮೂಲಕ ಪ್ರಜಾಪ್ರಭುತ್ವ ಹಕ್ಕನ್ನು ಎತ್ತಿ ಹಿಡಿಯಿರಿ. ಕಳೆದ ಹತ್ತು ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಯೋಜನೆ ಹಾಗೂ ಸಾಧನೆ ಗಮನಿಸಿ ಮತ ಹಾಕಿ ಎಂದು ವಿನಂತಿಸಿಕೊಂಡರು.
ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಕ್ಯಾವಟರ್:
ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ.ಶರಣಪ್ಪ ಹಾಗೂ ಮಾಜಿ ಶಾಸಕ ಕೆ.ಶರಣಪ್ಪ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ನೀಡಿದರು. ನಂತರ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.