ಜಿಬಿ ನ್ಯೂಸ್ ಕನ್ನಡ ಆರ್ಟಿಕಲ್

ಇನ್ನು ಎರಡು ದಿನ ಬಿಜೆಪಿ ಮೂರ್ಖತನ ಬಿಡದಿದ್ದರೆ ಕೊಪ್ಪಳದಲ್ಲಿ ಸೋಲು ಖಚಿತ!?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಹ ಫಲಿತಾಂಶದ ಕುರಿತು ನಾನು ವ್ಯಕ್ತಪಡಿಸಿದ ನಿಲುವಿಗೆ ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಫಲಿತಾಂಶ ಏನಾಯಿತು ಎಂಬುದು ಈಗ ಎಲ್ಲರಿಗೂ ತಿಳಿದೇ ಇದೆ.

2023ನೇ ವರ್ಷದ ಫೆಬ್ರವರಿಯಿಂದಲೇ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ನಾನು ಬರೆಯುತ್ತಾ ಬಂದಿದ್ದೇನೆ. ಆಗ ಚುನಾವಣೆಗಳು ಸಹ ಘೋಷಣೆಯಾಗಿರಲಿಲ್ಲ. ಬೊಮ್ಮಾಯಿ ಇನ್ನೂ ಮುಖ್ಯಮಂತ್ರಿಯಾಗಿದ್ದರು. ಆಗಲೂ ಇಂಥದೇ ಆಕ್ಷೇಪಣೆ ವ್ಯಕ್ತವಾಗಿತ್ತು. ಗ್ಯಾರಂಟಿಗಳ ಘೋಷಣೆಯಾದಾಗ, ಅವುಗಳನ್ನು ತಾತ್ವಿಕವಾಗಿ ವಿರೋಧಿಸಿದ್ದರೂ, ಅವೇ ಗ್ಯಾರಂಟಿಗಳೇ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತವನ್ನು ಸುಲಭವಾಗಿ ಕೊಡುತ್ತವೆ ಎಂದೂ ಬರೆದಿದ್ದೆ. ಆಗಲೂ ವಿರೋಧದ ಅಭಿಪ್ರಾಯಗಳು ಬಂದಿದ್ದವು.

ಗ್ಯಾರಂಟಿಗಳ ಲಾಭ ಸಿಗುತ್ತಿರುವುದು ಸಮಾಜದ ದುರ್ಬಲರಿಗೆ. ಅವುಗಳನ್ನು ಗೇಲಿ ಮಾಡುವುದು ಆ ಜನರನ್ನು ಗೇಲಿ ಮಾಡಿದಂತೆ. ಇದು ಕಾಮನ್‌ ಸೆನ್ಸ್‌ನ ಪ್ರಶ್ನೆಯಷ್ಟೇ ಅಲ್ಲ, ಇಲ್ಲದಿರುವವರ ಅಸಹಾಯಕತೆಯನ್ನು ಆಡಿಕೊಂಡಂತೆ. ಈ ಸೂಕ್ಷ್ಮ ಅರಿಯದ ಬಿಜೆಪಿಯ ಕೆಲವು ಅವಿವೇಕಿಗಳು ಪದೆಪದೆ ಗ್ಯಾರಂಟಿಗಳನ್ನು ʼಬಿಟ್ಟಿ ಭಾಗ್ಯಗಳುʼ ಎಂದು ಕರೆಯುತ್ತಾ ತಮ್ಮ ಅವನತಿಯನ್ನು ತಾವೇ ತಂದುಕೊಳ್ಳುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯ ಪಾಠವನ್ನು ಇವರು ಕಲಿತಿಲ್ಲ ಎಂಬುದಕ್ಕೆ ಈ ಅವಿವೇಕಿ ನಿಲುವುಗಳೇ ಸಾಕ್ಷಿ.

ಈಗಲೂ ಅಂಥದೇ ಅವಿವೇಕತನ ನಡೆಯುತ್ತಿದೆ. ಆ ಕುರಿತು ಪ್ರತ್ಯೇಕವಾಗಿ, ವಿವರವಾಗಿ ಬರೆಯುವೆ. ಏಕೆ ಬಿಜೆಪಿಗೆ ಹಿನ್ನಡೆಯಾಗುತ್ತಿದೆ ಎಂಬುದನ್ನು ಅದರಲ್ಲಿ ಸಮಗ್ರವಾಗಿ ವಿವರಿಸುವೆ.

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಮಾತು: ಇಲ್ಲಿ ಕಾಂಗ್ರೆಸ್‌ ಗೆಲ್ಲಲಿರುವುದು ಸಂಗಣ್ಣ ಕರಡಿಯವರ ಪಕ್ಷಾಂತರದಿಂದ ಅಲ್ಲ. ಅದು ತನ್ನದೇ ಗ್ಯಾರಂಟಿಗಳಿಂದ ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಿ, ಆರ್ಥಿಕವಾಗಿ ಬೆಂಬಲಿಸಿ ಪ್ರಚಾರಕ್ಕೆ ಕಳಿಸಿದ್ದರಿಂದ. ಕಾರ್ಯಕರ್ತರಿಗೆ ಖರ್ಚು ಮಾಡಲು ಜಿಪುಣತನ ಮಾಡಿಕೊಂಡು, ತಾವುತಾವೇ ಎಸಿ ಕಾರುಗಳಲ್ಲಿ ಓಡಾಡಿ, ವೇದಿಕೆ ಸಮಾರಂಭಗಳನ್ನೇ ತಮ್ಮ ಜನಪ್ರಿಯತೆ ಎಂದು ಭ್ರಮಿಸಿರುವ ಬಿಜೆಪಿಯ ಅವಿವೇಕಿ ನಾಯಕರ ಮೂರ್ಖತನದಿಂದ ಬಿಜೆಪಿ ಸೋಲಿನತ್ತ ಹೊರಟಿದೆ.

ಟಗರು ಗುಮ್ಮಲಿದೆಯಲೇ ಪರಾಕ್‌!

– ಚಾಮರಾಜ ಸವಡಿ ಹಿರಿಯ ಪತ್ರಕರ್ತರು ಕೊಪ್ಪಳ

Leave a Reply

Your email address will not be published. Required fields are marked *

Back to top button