ಹಿರೇಹಳ್ಳ ನೀರಾವರಿ ಯೋಜನೆಯಲ್ಲಿ ಅವ್ಯವಹಾರ 14 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

GBNEWSKANNADA-ಕೊಪ್ಪಳ: ಕುಕನೂರು ತಾಲ್ಲೂಕಿನ ಮುತ್ತಾಳ, ವೀರಾಪುರ, ಶಿರೂರು, ಹಾಗೂ ಕೊಪ್ಪಳ ತಾಲ್ಲೂಕಿನ ಮುದ್ಲಾಪುರ ಗ್ರಾಮಗಳಲ್ಲಿ ಹಿರೇಹಳ್ಳ ನೀರಾವರಿ ಯೋಜನೆಯಡಿ ಪುನರ್ವಸತಿ ಗ್ರಾಮಗಳಲ್ಲಿ ನಡೆಸಿದ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿದ ಆರೋಪದ ಮೇಲೆ 14 ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ,
- ಲೋಕಾಯುಕ್ತ ಡಿಎಸ್‌ಪಿ ವಸಂತಕುಮಾರ್ ನೇತೃತ್ವದಲ್ಲಿ ನಾಲ್ಕು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಸಿಂಗಟಾಲೂರು ಯೋಜನೆಯ ಮುಂಡರಗಿ ಇಇ ಕಚೇರಿ, ಅಳವಂಡಿ ಹಾಗೂ ಕಿನ್ನಾಳದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಧಾರವಾಡದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಲೆಕ್ಕಾಧಿಕಾರಿ, ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮುಂದುವರಿದಿದೆ.
ಕೊಪ್ಪಳ ತಾಲ್ಲೂಕಿನ ಅಳವಂಡಿ, ಕಿನ್ನಾಳ, ಗದಗ ಜಿಲ್ಲೆಯ ಮುಂಡರಗಿ ಹಾಗೂ ಧಾರವಾಡ ಕಚೇರಿಗಳಿಗೆ ಗುರುವಾರದಂದು ಲೋಕಾಯುಕ್ತ ಪೊಲೀಸರು, ದಾಖಲೆಗಳನ್ನು ಪರಿಶೀಲಿಸಿ 2014-1500 2021-22ರ ಅವಧಿಯಲ್ಲಿ ಕುಕನೂರು ತಾಲ್ಲೂಕಿನ ಮುತ್ತಾಳ, ವೀರಾಪುರ, ಶಿರೂರು, ಕೊಪ್ಪಳ ತಾಲ್ಲೂಕಿನ ಮುದ್ಲಾಪುರ ಗ್ರಾಮಗಳನ್ನು ಸ್ಥಳಾಂತರಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾಮಗಾರಿ ನಿರ್ವಹಿಸಲಾಗಿರುವ ಬಗ್ಗೆ ಮಾಹಿತಿ ಪಡೆದಿದೆ.
ಜಲಸಂಪನ್ಮೂಲ ಇಲಾಖೆಯಿಂದ ಕಾಂಕ್ರೀಟ್ ರಸ್ತೆ, ಚರಂಡಿ, ದೇವಾಲಯ, ಸಮುದಾಯ ಭವನ, ಬಸ್ ನಿಲ್ದಾಣ, ಕುಡಿಯುವ ನೀರು ಪೂರೈಕೆ ಹಾಗೂ ಇನ್ನಷ್ಟು ಕಾಮಗಾರಿಗಳನ್ನು ಕಳಪೆ ಗುಣಮಟ್ಟದಲ್ಲಿ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ, ಕೆಲವು ಕಾಮಗಾರಿಗಳನ್ನು ಭಾಗಶಃ ಮಾಡಿದ್ದು, ಇನ್ನೂ ಕೆಲವು ಕಾಮಗಾರಿಗಳನ್ನು ಮಾಡದೇ ಬಿಲ್ ಪಡೆಯಲಾಗಿದೆ. ಅಂದಾಜು ₹24 ಕೋಟಿಗೂ ಹೆಚ್ಚು ಮೊತ್ತದ ಒಂಬತ್ತು ಪ್ಯಾಕೇಜ್‌ಗಳಲ್ಲಿ ಕೈಗೊಂಡ ಕಾಮಗಾರಿಗಳ ಅನುಷ್ಠಾನದಲ್ಲಿ ₹5 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರಕ್ಕೆ ನಷ್ಟ ಮಾಡಲಾಗಿದೆ ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಟ್ಟಿದೆ.
14 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು :
ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಭಾಗ 1ರ ಮುಂಡರಗಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿವೃತ್ತರಾಗಿರುವ ಓದೋರಂಗಪ್ಪ, ಬಿ. ಹನುಮಂತರಾಯಪ್ಪ, ಹಿರೇಹಳ್ಳ ಯೋಜನೆ ಕಿನ್ನಾಳ ಉಪವಿಭಾಗದ ನಿವೃತ್ತ ಎಇಇ ಗಂಗಾಧರ, ನಿವೃತ್ತ ಸಹಾಯಕ ಎಂಜಿನಿಯರ್ ಶ್ಯಾಮಣ್ಣ, ಪ್ರಸ್ತುತ ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಳಗಾವಿಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಬಿ.ಆರ್. ರಾಠೋಡ್, ಧಾರವಾಡದಲ್ಲಿ ಮಲಪ್ರಭ ಬಲದಂಡ ಕಾಲುವೆ ವೃತ್ತ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಎಸ್.ಬಿ. ಮಲ್ಲಿಗೆವಾಡ ಅವರ ಮೇಲೆ ಹಾಗೂ
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಗದಗಿನ ಕಾರ್ಯನಿರ್ವಾಹಕ ಎಂಜಿನಿಯರ್ ಐ. ಪ್ರಕಾಶ್, ಯೋಜನೆಯ ಅಳವಂಡಿ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರಾಚಾರ್ಯ, ಚಿಕ್ಕಬಳ್ಳಾಪುರದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಉಪವಿಭಾಗ ಕಚೇರಿಯಲ್ಲಿ ಜೆಇ ಆಗಿರುವ ಸುನೀಲ್ ಪಿ.ಆರ್., ಗದಗ ಎಪಿಎಂಸಿಯಲ್ಲಿರುವ ಬಸವರಾಜ ಬಂಡಿವಡ್ಡರ, ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದಲ್ಲಿರುವ ನಂದೀಶ ಬಿ., ಅಳವಂಡಿಯಲ್ಲಿರುವ ಮನೋಹರ ಪಾಟೀಲ್, ಮಹಮ್ಮದ್ ಅರ್ಷದ್ ಅಮೀರ್ ಹುಸೇನ್ ಮತ್ತು ಹಿರೇಹಳ್ಳಿ ಉಪವಿಭಾಗ ಕಿನ್ನಾಳದಲ್ಲಿ ಕೆಲಸ ಮಾಡುತ್ತಿರುವ ಪಂಪಾಪತಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.