ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ
ಸರ್ಕಾರದಿಂದ ತ್ವರಿತ ಪರಿಹಾರಕ್ಕೆ ಮನವಿ ಸಲ್ಲಿಸುವೆ
ಶಾಸಕರಿಂದ ಸಂತ್ರಸ್ತರಿಗೆ ಸಾಂತ್ವನ
ಕೊಪ್ಪಳ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಣಿಜ್ಯ ಮಳಿಗೆಯಲ್ಲಿ ಸೋಮವಾರ ನಡೆದ ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಂಗಳವಾರ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರದ ಕೊಡಿಸುವ ಭರವಸೆ ನೀಡಿದರು.
ನಂತರ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ವಾಣಿಜ್ಯ ಮಳಿಗೆಯಲ್ಲಿ ನಡೆದ ಭೀಕರ ಅಗ್ನಿ ಅವಘಡದಿಂದ ಅಪಾರ ಮೌಲ್ಯದ ವಸ್ತುಗಳು ಬೆಂಕಿಗೆ ಭಸ್ಮವಾಗಿವೆ. ಮೋಹನ್ ಮೇಘರಾಜ್ ಅವರಿಗೆ ಸೇರಿದ ಬಣ್ಣದ ಅಂಗಡಿ ಸೇರಿದಂತೆ ಇತರೆ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ವೈಯಕ್ತಿಕವಾಗಿ ನೋವು ತರಿಸಿದೆ.
ಘಟನಾ ಸ್ಥಳದಲ್ಲಿ ಖುದ್ದಾಗಿ ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಯಶೋಧಾ ವಂಟಗೋಡಿ ಅವರು ಹಾಜರಿದ್ದು, ಬೆಂಕಿ ನಂದಿಸಲು ಸಿಬ್ಬಂದಿಗೆ ಮಾರ್ಗದರ್ಶನ ನೀಡಿ, ಇನ್ನೂ ಹೆಚ್ಚಾಗಲಿದ್ದ ಅನಾವುತ ತಪ್ಪಿಸಿ ಸುರಕ್ಷತಾ ಕಾರ್ಯ ಕೈಗೊಂಡಿದ್ದಾರೆ ಎಂದರು.
ಬೆಂಕಿ ಅವಘಡದಿಂದ ನೊಂದ ಸಂತ್ರಸ್ತರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತೇನೆ. ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಪರಿಹಾರ ನೀಡುವಂತೆ ಮನವಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಶ್ರೀನಿವಾಸ ಗುಪ್ತಾ, ತಹಸೀಲ್ದಾರ ವಿಠ್ಠಲ ಚೌಗಲೆ, ತಾಪಂ ಇಓ ದುಂಡಪ್ಪ ತುರಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.