ಮಾನವ ಕುಲಕ್ಕೆ ಪ್ರೇರಣೆಯಾಗಿವೆ ಆದಿಕವಿ ವಾಲ್ಮೀಕಿ ಅವರ ಸಂದೇಶಗಳು; ಹೆಚ್ ಆರ್ ಶ್ರೀನಾಥ
ಗಂಗಾವತಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ
ಗಂಗಾವತಿ, ಅ.17: ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಸಂದೇಶಗಳು ಮನುಕುಲದ ಬದುಕಿಗೆ ಪ್ರೇರಣೆಯಾಗಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಹೇಳಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ಗುರುವಾರ ತಾಲೂಕಾಡಳಿತ ಮತ್ತು ವಾಲ್ಮೀಕಿ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾರ್ಶನಿಕರನ್ನು ಒಂದು ಕೋಮಿಗೆ, ವರ್ಗಕ್ಕೆ ಮೀಸಲುಗೊಳಿಸದೇ ಎಲ್ಲ ಜನಾಂಗದವರು ಕೂಡಿ ಅವರ ಜಯಂತಿ ಆಚರಿಸಿ ಅವರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು.
ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಜಾತಿ, ವರ್ಗ, ಶೋಷಣೆ ರಹಿತ, ಸಮಪಾಲು, ಸಮಬಾಳು, ಸಮಾನ ಅವಕಾಶದ ಸುಖ ಸಮಾಜದ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿರುತ್ತವೆ. ಸಮಾಜದಲ್ಲಿ ಜ್ಞಾತಿ ಮೀರಿದ ಸಮ ಸಮಾಜ ನಿರ್ಮಾಣ ಅಗತ್ಯವಿದೆ ಎಂದರು.
ಮಾಜಿ ಸಂಸದ ಎಸ್. ಶಿವರಾಮಗೌಡ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ಮೂಲಕ ಯುವ ಪೀಳಿಗೆ ಅವರ ಜೀವನ ಚರಿತ್ರೆಯನ್ನು ಮೆಲಕು ಹಾಕಬೇಕು. ಅವರ ಸಂದೇಶಗಳಮತೆ ಜೀವನ ಸಾಗಿಸಬೇಕು ಎಂದರು.
ತಹಶೀಲ್ದಾರ ಯು.ನಾಗರಾಜ ಮತ್ತು ಸಮಾಜದ ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ ಕಾರ್ಯಕ್ರಮ ಕುರಿತು ಮಾತನಾಡಿದರು. ಸಮಾಜದ ವಿವಿಧ ಬೇಡಿಕೆ ಈಡೇರಿಸುವಂತೆ ಸಮಾಜದ ಮುಖಂಡರು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಇದೇ ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾಸಿ ಗೌರವಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ದುರುಗೇಶ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ತಾ.ಪಂ.ಇಒ ಲಕ್ಷ್ಮೀದೇವಿ, ಶಿಕ್ಷಣಪ್ರೇಮಿ ನೆಕ್ಕಂಟಿ ಸೂರಿಬಾಬು, ಉದ್ಯಮಿ ಕೆ.ಕಾಳಪ್ಪ, ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಲಲಿತಾರಾಣಿ ರಾಯುಲು, ವಾಲ್ಮೀಕಿ ಸಮಾಜದ ಮುಖಂಡರಾದ ಬಸಪ್ಪ ನಾಯಕ, ಕೃಷ್ಣಪ್ಪ ನಾಯಕ, ಯಮನೂರ ಚೌಡ್ಯ,ಮಲ್ಲೇಶ ನಾಯಕ ಹೊಸಮಲಿ, ಮಂಜುನಾಥ ನಾಯಕ ಮಳ್ಳಿಕೇರಿ ಸೇರಿದಂತೆ ಅನೇಕರಿದ್ದರು.