

ಕುಕನೂರು ಪೂರ್ವ ವಲಯ ಮಟ್ಟದ ಕ್ರೀಡಾಕೂಟ: ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ
ಕುಕನೂರು, ಆ.07: ಬಳಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಕುಕನೂರು ಪೂರ್ವ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ಅಥ್ಲೆಟಿಕ್ಸ್ ಹಾಗೂ ತಂಡಗಳ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಕಾರ್ತಿಕ್ ನಾಯಕ್ 400 ಮೀಟರ್ ಓಟದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ, ಮನೋಜ್ ಬಳ್ಳಾರಿ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಗಿರೀಶ್ ದೊಡ್ಡಮನಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ಗಣೇಶ್ ಭಜಂತ್ರಿ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಹಾಗೂ ಭರತ್ ಕುಮಾರ್ ತಲ್ಲೂರು 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು. ಜೊತೆಗೆ ಬಾಲಕರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಯಿತು.
ಬಾಲಕಿಯರ ವಿಭಾಗದಲ್ಲಿ ಅನುಷಾ ಸುಳಿಕೇರಿ 100 ಮೀಟರ್ ಓಟದಲ್ಲಿ ದ್ವಿತೀಯ, ಪೂಜಾ ಹಲಸಿನಮರ 400 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ, ಕೀರ್ತನಾ ವಡ್ಡರ್ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದರು. ಮಲ್ಲಮ್ಮ ಗ್ವಾಲಗೇರಿಮಠ ಬಲ್ಲೆ ಎಸೆತದಲ್ಲಿ ಪ್ರಥಮ, ಅಮೃತ ಇಟಗಿ ಬಲ್ಲೆ ಎಸೆತದಲ್ಲಿ ದ್ವಿತೀಯ, ಸುಷ್ಮಾ ಹೊನ್ನುಂಚಿ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತ ಹಾಗೂ ಸರಪಳಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದರು. ತನುಶ್ರೀ ಸುಳಿಕೇರಿ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ, ಕಾವೇರಿ ಇಟಗಿ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಹಾಗೂ ಶ್ವೇತಾ ನಂದಿಕೋಲಮಠ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದರು.
ಇದಲ್ಲದೆ ಬಾಲಕಿಯರ 4×100 ಮೀಟರ್ ಹಾಗೂ 4×400 ಮೀಟರ್ ರಿಲೇ ತಂಡಗಳು ದ್ವಿತೀಯ ಸ್ಥಾನ, ಕಬಡ್ಡಿ ತಂಡ ದ್ವಿತೀಯ ಸ್ಥಾನ ಮತ್ತು ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿವೆ.
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಅಭಿನವ ಗವಿಶ್ರೀಗಳು, ಆಡಳಿತ ಮಂಡಳಿ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿಗ: ಚನ್ನಯ್ಯ ಹಿರೇಮಠ, ಕುಕನೂರು



